ಮಡಿಕೇರಿ, ಅ. ೧೧: ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸುವ ನಿರ್ಧಾರ ಮಡಿಕೇರಿಯಲ್ಲಿ ಸಕಾರಾತ್ಮಕ ಸ್ಪಂದನ ಪಡೆದುಕೊಂಡಿದ್ದು, ದಸರಾ ಮುಗಿದ ನಂತರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು ನಗರದಲ್ಲಿ ಕಂಡುಬAದಿವೆ.

ಕಳೆದ ೫ ತಿಂಗಳಿನಿAದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅರ್ಧ ಮತ್ತು ಒಂದು ಲೀಟರ್‌ಗಳ ಕುಡಿಯುವ ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪರಿಸರಕ್ಕೆ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಅಪಾಯ, ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ನಗರಸಭೆ ಮೂಲಕ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಈ ಆದೇಶ ಜಾರಿಗೊಳಿಸಿದ್ದು, ದಸರಾ ಸಂದರ್ಭದಲ್ಲಿಯೂ ಇದು ಪರಿಣಾಮ ಬೀರಿದೆ.

ಪ್ರತೀ ವರ್ಷ ದಸರಾ ಮುಗಿದ ನಂತರ ನಗರಸಭೆಯ ಪೌರ ಸಿಬ್ಬಂದಿಗಳು ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭ ಏನಿಲ್ಲವೆಂದರೂ ೧ ಲಕ್ಷದಷ್ಟು ಪ್ಲಾಸ್ಟಿಕ್ ಬಾಟಲಿಗಳು ನಗರದಾದ್ಯಂತ ದೊರಕುತ್ತಿದ್ದವು. ಆದರೆ ಈ ವರ್ಷ ದಸರಾ ಮುಗಿದ ಬಳಿಕ ೪ ದಿನಗಳ ಕಾಲ ತ್ಯಾಜ್ಯ ವಿಲೇವಾರಿಗೆ ಪೌರ ಕಾರ್ಮಿಕರು ಮುಂದಾದಾಗ ಕೇವಲ ೫-೬ ಸಾವಿರ ಪ್ಲಾಸ್ಟಿಕ್ ಬಾಟಲಿಗಳು, ಜ್ಯೂಸ್ ಬಾಟಲಿಗಳು ಮಾತ್ರ ದೊರಕಿವೆ. ಅತೀ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು ಪತ್ತೆಯಾಗುತ್ತಿದ್ದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ವರ್ಷ ಕೇವಲ ೧ ಚೀಲ ಮಾತ್ರ ಬಾಟಲಿಗಳು ದೊರಕಿವೆ ಎಂದು ನಗರಸಭೆಯ ಪೌರಾಯುಕ್ತ ಹೆಚ್.ಎಸ್. ರಮೇಶ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಸಂಬAಧಿತ ಹೆಚ್ಚಿನ ಜಾಗೃತಿ ಮೂಡಿರುವುದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ, ಶಾಸಕರು, ನಗರಸಭಾ ಸದಸ್ಯರು, ಚೇಂಬರ್ ಆಫ್ ಕಾಮರ್ಸ್ನ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ರಮೇಶ್ ಹೇಳಿದರು.

ದಸರಾದಲ್ಲಿ ಸಂಗ್ರಹವಾದ ತ್ಯಾಜ್ಯ ಎಷ್ಟು?

ದಸರಾ ದಿನದಂದು ಸಾವಿರಾರು ಜನರು ಮಡಿಕೇರಿಯ ವಿವಿಧೆಡೆ ಸೇರಿದ್ದರು. ದಸರಾ ಮುಗಿದ ನಂತರದ ೪ ದಿನಗಳ ಕಾಲ ೫೦ ರಷ್ಟು ಪೌರಕಾರ್ಮಿಕರು ೪ ಟಿಪ್ಪರ್ (ಮೊದಲ ಪುಟದಿಂದ) ಮೂಲಕ ನಗರವ್ಯಾಪಿ ಸ್ಚಚ್ಛತೆಗೆ ಮುಂದಾದರು. ಈ ಸಂದರ್ಭ ೨೪ ಟನ್ ಗಳಷ್ಟು ತ್ಯಾಜ್ಯ ದೊರಕಿತ್ತು. ಕಳೆದ ವರ್ಷಗಳಿಗೆ ಹೋಲಿಸಿದರೆ ತ್ಯಾಜ್ಯದ ಪ್ರಮಾಣ ಕಡಮೆಯಾಗಿದೆ. ಅದರಲ್ಲಿಯೂ ಪ್ಲಾಸ್ಟಿಕ್‌ನ ಪ್ರಮಾಣ ಶೇ. ೯೦ ರಷ್ಟು ಇಳಿಕೆಯಾಗಿದೆ, ಜೊತೆಗೆ ಭಾರೀ ಪ್ರಮಾಣದ ತ್ಯಾಜ್ಯ ಸಂಗ್ರಹಕ್ಕೆ ಅಗತ್ಯವಾಗಿದ್ದ ಜಾಗವೂ ಉಳಿಕೆಯಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಸದ್ಯಕ್ಕೆ ೬೩ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ೧೧ ಆಟೋ ಟಿಪ್ಪರ್, ೪ ಟ್ರಾಕ್ಟರ್ ಸೇರಿದಂತೆ ಹೊಸದಾಗಿ ಎರಡು ಆಟೋ ಟಿಪ್ಪರ್‌ಗಳು ಇದೀಗ ಸೇರ್ಪಡೆಯಾಗಿದ್ದು ೧೭ ವಾಹನಗಳು ನಿತ್ಯವೂ ತ್ಯಾಜ್ಯ ವಿಲೇವಾರಿಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು.

ಅಲ್ಲಲ್ಲಿ ಕುಡಿಯುವ ನೀರು ಸೌಲಭ್ಯ

ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ನಿಷೇಧವಾದ ಹಿನ್ನಲೆಯಲ್ಲಿಯೇ ಇದೀಗ ಸಾರ್ವಜನಿಕರಿಗೆ ನಗರದ ಅಲ್ಲಲ್ಲಿ ಕುಡಿಯುವ ನೀರು ಸೌಲಭ್ಯ ದೊರಕುವಂತೆ ಮಾಡುವ ವ್ಯವಸ್ಥೆಗೆ ಶಾಸಕರಾದ ಡಾ. ಮಂತರ್ ಗೌಡ ಮುಂದಾಗಿದ್ದಾರೆ. ಶಾಸಕ ಮಂತರ್ ಗೌಡ ಅವರು ನೀಡಿರುವ ರೂ. ೭.೫೦ ಲಕ್ಷ ಅನುದಾನ ಬಳಸಿಕೊಂಡು ಮಡಿಕೇರಿಯಾದ್ಯಂತ ಕುಡಿಯುವ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲಾಗುತ್ತಿದ್ದು, ದಿನದ ೨೪ ಗಂಟೆಯೂ ಇಲ್ಲಿ ಶುದ್ಧ ನೀರು ಕುಡಿಯಲು ಲಭ್ಯವಾಗಲಿದೆ. ನಗರಸಭೆ ಬಳಿ, ಕಾಫಿ ಕೃಪಾ ಕಟ್ಟಡ, ರಾಜಾಸೀಟ್ ಬಳಿ, ಎಸ್.ಬಿ.ಐ. ರಸ್ತೆ, ಹಳೇ ಬಸ್ ಸ್ಟಾö್ಯಂಡ್, ತಿಮ್ಮಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಓಂಕಾರೇಶ್ವರ ದೇವಾಲಯದ ಪ್ರವೇಶ, ಹೊಸ ಬಸ್ ಸ್ಟಾö್ಯಂಡ್, ಕಾಲೇಜು ರಸ್ತೆ ಸೇರಿದಂತೆ ನಗರದ ೧೨ ಕಡೆಗಳಲ್ಲಿ ೧೫ ದಿನಗಳೊಳಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಲಿವೆ, ಚೇನ್ ಲಿಂಕ್ ಮೂಲಕ ಲೋಟವನ್ನು ಘಟಕದ ಮುಂಬದಿ ಇರಿಸಲಾಗುತ್ತದೆ. ಯಾರು ಬೇಕಿದ್ದರೂ ನೀರನ್ನು ಕುಡಿಯಲು ಬಳಸಬಹುದು.

ಜೊತೆಗೆ ೨ ಲೀಟರ್ ಶೀಷೆಯಲ್ಲಿ ಕೂಡ ನೀರನ್ನು ಸಂಗ್ರಹಿಸಲು ಪಡೆಯಬಹುದಾಗಿದೆ. ಪ್ರತಿ ಘಟಕಕ್ಕೂ ಟ್ಯಾಂಕ್ ಅಳವಡಿಸಲಾಗಿದ್ದು ಇಲ್ಲಿಂದ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಲಿಸಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದರು.

ಮೇ ಮಾಸಾಂತ್ಯದಿAದ ಮಡಿಕೇರಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೊಂದು ಅಭಿವೃದ್ಧಿ ಕೆಲಸಗಳು ವಿಳಂಬವಾಗಿದೆ. ಮಳೆ ನಿಂತ ಕೂಡಲೇ ರಸ್ತೆ ದುರಸ್ತಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ಹೆಚ್.ಆರ್. ರಮೇಶ್ ತಿಳಿಸಿದರು.