ಶ್ರೀಮಂಗಲ, ಅ. ೧೧: ಸರ್ಕಾರದ ಪೋಷಣ್ ಕಾರ್ಯಕ್ರಮದ ಭಾಗವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿದ್ದರು.

ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಶಾಸಕರು ಪುಟಾಣಿ ಮಕ್ಕಳಿಗೆ ಬರವಣಿಗೆಯ ಮೊದಲ ಪಾಠ ಮಾಡಿದರೆ, ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಋತುಮತಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದರು.

ಬಳಿಕ ಮಾತನಾಡಿದ ಶಾಸಕರು, ವಿದ್ಯಾಭ್ಯಾಸಕ್ಕೆ ಪೂರಕವಾಗಲೆಂದು ಸರಕಾರವು ಮಕ್ಕಳಿಗೆ ವಿವಿಧ ಸವÀಲತ್ತುಗಳನ್ನು ಕಲ್ಪಿಸಲು ಬದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅವರಿಗೆ ಬೇಕಾದÀ ಎಲ್ಲಾ ಪೌಷ್ಟಿಕಾಂಶ ಇರುವಂತ ಆಹಾರಗಳನ್ನು ಸರಕಾರ ಕೊಡುಗೆಯಾಗಿ ನೀಡುತ್ತಿದೆ ಎಂದರು.

ಈ ಕಾರ್ಯಕ್ರಮಗಳು ಎಲ್ಲರಿಗೂ ತಲುಪುವಂತಾಗಬೇಕು. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಪೌಷ್ಟಿಕಾಂಶದ ಕೊರತೆಗಳಿಂದ ಬಳಲುತ್ತಿರುವುದು ವರದಿಗಳಿಂದ ಮನಗಂಡ ಸರಕಾರವು ಇಂತಹ ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಹುದಿಕೇರಿ ಪಂಚಾಯಿತಿ ಅಧ್ಯಕ್ಷೆ ಕಾವೇರಮ್ಮ, ಸದಸ್ಯರಾದ ರೇವತಿ, ಮನೋಹರ್ ಸೋಮಯ್ಯ, ಶಿಲ್ಪಾ, ಸುನಿಲ್, ದಮಯಂತಿ ಹಾಗೂ ಪಿ.ಡಿ.ಓ. ಪುಟ್ಟಸ್ವಾಮಿ ಇಲಾಖಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.