ಮಡಿಕೇರಿ, ಅ. ೧೧: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದಲ್ಲಿರುವ ಹರ್‌ಮಂದಿರ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿದುರಂತ ಸಂಬAಧ ತನಿಖೆ ಚುರುಕುಗೊಂಡಿದ್ದು, ವಸತಿ ನಿಲಯ ಪ್ರಾರಂಭಕ್ಕೆ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಶಾಲಾ ಆಡಳಿತ ಮಂಡಳಿ ಪಡೆದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚೆಸ್ಕಾಂ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದು, ವರದಿ ನೀಡಬೇಕಾಗಿದೆ.

ತಾ. ೯ ರಂದು ನಸುಕಿನ ವೇಳೆಯಲ್ಲಿ ಹರ್‌ಮಂದಿರ ಶಾಲೆಯ ವಸತಿ ನಿಲಯದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಸಂದರ್ಭ ಚೆಟ್ಟಿಮಾನಿಯ ಅನಿಲ್ ಹಾಗೂ ತ್ರಿವೇಣಿ ದಂಪತಿಯ ಪುತ್ರ, ೨ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಸಜೀವ ದಹನವಾಗಿ ಮೃತಪಟ್ಟಿದ್ದ. ಉಳಿದ ೫೨ ವಿದ್ಯಾರ್ಥಿಗಳು ಹಾಗೂ ಓರ್ವ ವಾರ್ಡನ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಮೃತ ಬಾಲಕನ ಕುಟುಂಬಕ್ಕೆ ಸರಕಾರ ರೂ. ೫ ಲಕ್ಷ ಪರಿಹಾರವನ್ನು ಘೋಷಿಸಿದೆ.

ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದರೂ ನಿಖರ ಕಾರಣವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖಗೊಂಡಿದ್ದಾರೆ.

ಚೆಸ್ಕಾಂ ಇಂಜಿನಿಯರ್‌ಗಳು, ಅಗ್ನಿಶಾಮಕ ದಳ ಅಧಿಕಾರಿಗಳು ವಿದ್ಯುತ್ ಅವಘಡಕ್ಕೆ ಕಾರಣ ಏನೆಂಬ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ಕಟ್ಟಡದ ಗುಣಮಟ್ಟದ ಬಗ್ಗೆ ಇಂಜಿನಿಯರ್‌ಗಳು ಪರಿಶೀಲನೆ ಕೈಗೊಂಡಿದ್ದು, ತನಿಖೆ ಮುಂದುವರೆದಿದೆ.

ವಸತಿ ನಿಲಯಕ್ಕೆ ಅನುಮತಿ ಇಲ್ಲ

೨೦೧೮-೧೯ರ ಸಾಲಿನಿಂದ ಶಾಲೆ ನಡೆಯುತ್ತಿದ್ದು, ಶಾಲೆ ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ವಸತಿ ನಿಲಯಕ್ಕೆ ಯಾವುದೇ ಅವಕಾಶವನ್ನು ಇಲಾಖೆ ನೀಡಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬಸವರಾಜು ಸ್ಪಷ್ಟಪಡಿಸಿದ್ದಾರೆ.

ಚಟುವಟಿಕೆಯೊಂದಿಗೆ ಶಿಕ್ಷಣ ಎಂಬ ಉದ್ದೇಶದಿಂದ ಈ ಶಾಲೆ ನಡೆಯುತ್ತಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ವಿದ್ಯಾರ್ಥಿಗಳಿಗೆ ಎಲ್‌ಕೆಜಿಯಿಂದ ೭ನೇ ತರಗತಿ ತನಕ ಉಚಿತ ಶಿಕ್ಷಣದೊಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿತ್ತು. ಶಾಲೆಯಲ್ಲಿ ೧೦೩ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಸದ್ಯ ಶಾಲೆಯನ್ನು ಬಂದ್ ಮಾಡಿರುವ ಶಿಕ್ಷಣ ಇಲಾಖೆ ಅಲ್ಲಿನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.