ಕೂಡಿಗೆ, ಅ. ೧೧: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಸೋಮವಾರಪೇಟೆ, ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ಆಶ್ರಯದಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳದ ಬೆಳೆಯು ಈಗಾಗಲೇ ಕಟಾವು ಹಂತಕ್ಕೆ ಬಂದಿದ್ದರೂ ಸಹ ಕಟಾವು ಮಾಡಲು ಮಳೆಯ ಅಡಚಣೆಯು ಈ ವ್ಯಾಪ್ತಿಯ ರೈತರನ್ನು ಕಾಡುತ್ತಿದೆ.
ವರ್ಷಂಪ್ರತಿಯAತೆ ಈ ಬಾರಿಯು ವ್ಯಾಪ್ತಿಯ ರೈತರು ಮಳೆಯ ಆಶ್ರಯದಲ್ಲಿ ಹೈಬ್ರೀಡ್ ತಳಿಯ ಮೆಕ್ಕೆಜೋಳದ ಬಿತ್ತನೆ ಮಾಡಿ ಬೇಸಾಯ ಮಾಡಿದ್ದರು.
ಆದರೆ ೪ ತಿಂಗಳ ಅಧಿಕ ಮಳೆಯಿಂದಾಗಿ ಕಳೆದ ಸಾಲಿನಷ್ಟು ಉತ್ತಮ ಗುಣಮಟ್ಟದ ಬೆಳೆಯು ಬಾರದಿದ್ದರೂ ಸ್ವಲ್ಪ ಮಟ್ಟಿಗೆ ಬೆಳೆ ಬಂದಿದೆ. ಈಗಾಗಲೇ ಮೆಕ್ಕೆಜೋಳವು ಸಣ್ಣ ಪ್ರಮಾಣದಲ್ಲಿ ಕಾಳು ಕಟ್ಟಿದ್ದು, ಕಟಾವು ಹಂತಕ್ಕೆ ಬಂದಿದ್ದರೂ ಮಳೆ ಮಾತ್ರ ಕಡಿಮೆಯಾಗಿಲ್ಲ. ಕಟಾವು ಮಾಡಿ ಜಮೀನಿನಲ್ಲಿ ಬಿಟ್ಟರೆ ಮೆಕ್ಕೆಜೋಳವು ಬೇಗ ಮೊಳಕೆ ಬರುವುದರಿಂದ ಕಟಾವು ಬಗ್ಗೆ ಯೋಚನೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಮೆಕ್ಕೆಜೋಳಕ್ಕೆ ಕಳೆದ ಸಾಲಿಗಿಂತ ಈ ಬಾರಿ ಉತ್ತಮ ಬೆಲೆ ಇರುವುದರಿಂದ ಹೆಚ್ಚು ಬೇಡಿಕೆ ಕಂಡುಬರುತ್ತಿದೆ, ಮೆಕ್ಕೆಜೋಳವು ಹೆಚ್ಚಾಗಿ ಪಶು ಆಹಾರ ಮತ್ತು ಬಿಸ್ಕತ್ತು ಕಂಪೆನಿಗಳಿಗೆ ಸಾಗಾಟವಾಗುವುದು. ಈಗಾಗಲೇ ಮೆಕ್ಕೆಜೋಳ ಒಂದು ಕ್ವಿಂಟಾಲ್‌ಗೆ ೨ ಸಾವಿರದಷ್ಟು ಬೆಲೆ ನಿಗದಿಯಾಗಿದ್ದು, ಮೈಸೂರು ವಿಭಾಗದ ಮೆಕ್ಕೆಜೋಳ ಖರೀದಿದಾರರು ಖರೀದಿಸಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಕಳೆದ ಸಾಲಿನಲ್ಲಿ ಈ ಸಮಯದಲ್ಲಿ ಮೆಕ್ಕೆಜೋಳ ಕ್ವಿಂಟಾಲ್‌ಗೆ ೧.೫೦೦ ರೂ. ಗಳಷ್ಟಿತ್ತು. ಈ ಬಾರಿ ಬೆಲೆ ಉತ್ತಮವಾಗಿದೆ. ಜೋಳದ ಕಾಳುಗಳನ್ನು ಮಾರಾಟ ಮಾಡಿದರೆ ಅದರ ದಿಂಡು ಹಸುಗಳಿಗೆ ಆಹಾರವಾಗುತ್ತದೆ ಎಂದು ಸೀಗೆಹೊಸೂರು ರೈತರಾದ ಸ್ವಾಮಿ, ಗಣೇಶ, ಮಂಜುನಾಥ, ಮರೂರು ಮಹದೇವ, ಕುಮಾರ್ ಹೇಳುತ್ತಾರೆ.