ಕಣಿವೆ, ಅ. ೧೨: ಬಿತ್ತುವ ಆ ಒಂದೇ ಒಂದು ಬೀಜದಿಂದ ಸಾವಿರ ಬೀಜಗಳನ್ನು ಸೃಷ್ಟಿ ಮಾಡುವ ತಾಕತ್ತು ಇರುವುದು ಕೇವಲ ಭೂಮಿತಾಯಿಗೆ ಮಾತ್ರ. ಇದರ ಒಡಲಿಗೆ ಬಿತ್ತುವ ಬೀಜಗಳು ಮೊಳಕೆಯೊಡೆದು ಸಮೃದ್ಧಿಯಿಂದ ಬೆಳೆದು ಬೆಳೆಗಾರನ ಕಿಸೆ ತುಂಬಿದಾಗ ಆತನ ಮೊಗದಲ್ಲಿ ಮೂಡುವ ಮಂದಹಾಸ ಅಗಾಧವಾದುದು. ಈ ಬೀಜಗಳ ಪೈಕಿ ‘ಕೆಸ' ಕೃಷಿಗೆ ಮಾರುಕಟ್ಟೆಯಲ್ಲಿ ಈಗ ಉತ್ತಮವಾದ ದರ ಇದೆ. ಅಂದರೆ ಒಂದು ಕ್ವಿಂಟಾಲ್ ತೂಕದ ಕೆಸದ ಗೆಡ್ಡೆಗೆ ಪ್ರಸಕ್ತ ಮಾರುಕಟ್ಟೆಯಲ್ಲಿ ೩ ಸಾವಿರದಿಂದ ೩,೧೦೦ ರೂಗಳಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಕೆಸಕ್ಕೆ ಮಾರುಕಟ್ಟೆಯಲ್ಲಿ ಅತ್ಯಧಿಕ ಅಂದರೆ ೬೦೦೦ ರೂಗಳೂ ಕೂಡ ಇತ್ತು.

ಒಂದು ಎಕರೆ ಭೂಮಿಯಲ್ಲಿ ಸರಾಸರಿ ೧೦ ರಿಂದ ೧೨ ಟನ್ ವರೆಗೂ ಕುಶಾಲನಗರ ತಾಲೂಕಿನ ತೊರೆನೂರು, ಶಿರಂಗಾಲ, ಭೈರಪ್ಪನಗುಡಿ, ಸಿದ್ದಲಿಂಗಪುರ, ಹೆಬ್ಬಾಲೆ, ಏಲಕ್ಕನೂರು ಮೊದಲಾದ ಭಾಗಗಳ ಕೃಷಿಕರು ಹೆಚ್ಚಾಗಿ ಬೆಳೆಯುತ್ತಾರೆ. ಏಳು ತಿಂಗಳಿAದ ಎಂಟು ತಿಂಗಳ ಕಾಲಾವಧಿಯ ಈ ಕೆಸ ಕೃಷಿಯನ್ನು ಕೊಡಗಿನ ರೈತರು ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿ ಜುಲೈ ತಿಂಗಳಲ್ಲಿ ಕಟಾವು ಮಾಡುತ್ತಾರೆೆ, ಕೊಡಗಿನ ನೆರೆ ರಾಜ್ಯ ಕೇರಳದ ಪ್ರಮುಖ ಹಬ್ಬ ಓಣಂ ಆಚರಣೆಯಲ್ಲಿ ಈ ಕೆಸ ಹೆಚ್ಚು ಬಳಕೆಯಾಗುವ ಕಾರಣ ಮಾರುಕಟ್ಟೆಯಲ್ಲಿ ಒಂದಷ್ಟು ಉತ್ತಮವಾದ ದರ ದೊರಕುತ್ತದೆ. ಜೊತೆಗೆ ಕೊಡಗು ಜಿಲ್ಲೆಯಲ್ಲೂ ನೆರೆಯ ಕೇರಳದ ಮಂದಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾರಣ ಈ ಕೆಸಕ್ಕೆ ಹೆಚ್ಚು ಬೇಡಿಕೆ ಇರುತ್ತದೆ ಎನ್ನುತ್ತಾರೆ ತೊರೆನೂರು ಕೃಷಿಕ ನಾಗರಾಜು.

ಇತ್ತೀಚೆಗೆ ಬಹಳಷ್ಟು ರೈತರು ಏಕಮುಖವಾಗಿ ಶುಂಠಿಯAತಹ ಒಂದೊAದೇ ಕೃಷಿಗೆ ಮುಖ ಮಾಡುತ್ತಾ ಬೆಲೆ ಹಾಗೂ ಬೆಳೆ ಕುಸಿತದ ನಷ್ಟಕ್ಕೆ ಸಿಲುಕುತ್ತಿದ್ದಾರೆ. ಅದರ ಬದಲು ಕೆಸ, ಸುವರ್ಣ ಗೆಡ್ಡೆ, ಸಿಹಿ ಗೆಣಸು ಮೊದಲಾದ ಕಾಯಿ ಪಲ್ಯೆಗಳ ಕೃಷಿಗೆ ತೊಡಗಿಸಿಕೊಳ್ಳಬೇಕು ಎನ್ನುವುದು ಕೃಷಿಕ ನಾಗರಾಜು ಅಭಿಪ್ರಾಯವಾಗಿದೆ.

ಖರ್ಚು ಕಡಿಮೆ - ಆದಾಯ ಅಧಿಕ

ಈ ಕೆಸ ಕೃಷಿಗೆ ಒಂದು ಎಕರೆ ಭೂಮಿಯಲ್ಲಿ ಬೆಳೆಯಲು ೫೦ ಸಾವಿರ ಖರ್ಚು ತಗಲುತ್ತದೆ.

ಬೆಳೆ ಚೆನ್ನಾಗಿ ಬಂದು ಇಳುವರಿಯೂ ಅಧಿಕವಾದರೆ ಕನಿಷ್ಟ ೧೨ ಟನ್ ಬಂದರೂ ಕೂಡ ಆದಾಯ ಬರುತ್ತದೆ.

ಒಂದು ಎಕರೆ ಭೂಮಿಯಲ್ಲಿ ಈ ಕೆಸ ಬೆಳೆಯಲು ೫೦೦ ರಿಂದ ೬೦೦ ಬುಡಗಳು ಬೇಕಾಗುತ್ತದೆ. ಒಂದು ಬಿತ್ತನೆಯ ಬುಡಕ್ಕೆ ಹತ್ತು ರೂಪಾಯಿ ಇದ್ದು ೬೦೦ ಬಿತ್ತನೆ ಬುಡಗಳಿಗೆ ೬೦೦೦ ರೂ ತಗಲುತ್ತದೆ.

ಇನ್ನು ಕಚ್ಚಾ ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗೆ ಹದಗೊಳಿಸಲು ಉಳುಮೆಗೆ ಹತ್ತು ಸಾವಿರ ಖರ್ಚಾಗುತ್ತದೆ. ಬಿತ್ತನೆಗೈದ ಭೂಮಿಗೆ ನೀರು ಸಿಂಪಡಿಸಲು ಅಳವಡಿಸುವ ಮೈಕ್ರೋ ಪೈಪ್‌ಲೈನ್‌ಗೆ ೧೫ ಸಾವಿರ, ಕೃಷಿ ಕಾರ್ಮಿಕರಿಗೆ ೧೦ ಸಾವಿರ, ಬಿತ್ತನೆಯಿಂದ ಕಟಾವಿನತನಕ ಮೂರು ಬಾರಿಯ ಕಳೆನಾಶಕ ಸಿಂಪಡಣೆಗೆ ೩ ಸಾವಿರ, ಇನ್ನು ಮೂರು ಅವಧಿಯ ರಾಸಾಯನಿಕ ಗೊಬ್ಬರ ಅಳವಡಿಕೆಗೆ ೧೫ ಸಾವಿರ ಖರ್ಚಾಗುತ್ತದೆ ಎಂದು ಕೃಷಿಕ ನಾರಾಯಣ್ ಸ್ಥಳಕ್ಕೆ ತೆರಳಿದ್ದ "ಶಕ್ತಿ"ಯೊಂದಿಗೆ ಕೆಸ ಬೆಳೆಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.

ಕೇರಳದಲ್ಲಿ ಹೆಚ್ಚು ಬಳಕೆ

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಕೆಸ ಕಾಯಿಪಲ್ಯೆಗೆ ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನಲಾಗಿದೆ. ಅಂದರೆ ಭೂಮಿಯ ಮಣ್ಣಿನೊಳಗೆ ಬೆಳೆಯುವ ಗೆಡ್ಡೆ ಗೆಣಸುಗಳಂತಹ ಬೆಳೆಗೆ ಕೇರಳೀಯರು ಹೆಚ್ಚಾಗಿ ಬಳಸುವ ಕಾರಣ ಕೊಡಗಿನಲ್ಲಿ ಬೆಳೆಯುವ ಗೆಡ್ಡೆ ಗೆಣಸುಗಳೆಲ್ಲಾ ಸಾಗಾಟ ಆಗುವುದೇ ಕೇರಳಕ್ಕೆ.

ಈ ಕೆಸದ ಗೆಡ್ಡೆಗಳಿಂದ ಚಿಪ್ಸ್ ತಯಾರಿಸಿ ಬೇಕರಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೇ ಇನ್ನಿತರ ಖಾದ್ಯಗಳಿಗೂ ಇದನ್ನು ಬಳಸುತ್ತಾರÉÉ.