ಶನಿವಾರಸಂತೆ, ಅ. ೧೨: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ೩೫ನೇ ವರ್ಷದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವ ಶನಿವಾರ ರಾತ್ರಿ ಸಂಭ್ರಮ-ಸಡಗರದೊAದಿಗೆ ನೆರವೇರಿತು.

ಬೆಳಿಗ್ಗೆ ದೇವಸ್ಥಾನದ ಅರ್ಚಕ ಮಂಜುನಾಥ್ ಶರ್ಮ ಅವರ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಶಾಂತಿ ಹೋಮ, ದುರ್ಗಾ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ವಿಜಯ ವಿನಾಯಕನಿಗೆ ಮಹಾಪೂಜೆ, ತೀರ್ಥ-ಪ್ರಸಾದ ವಿತರಣೆ ನಂತರ ರಾತ್ರಿಯವರೆಗೆ ಭಕ್ತಾದಿಗಳಿಗೆ ನಿರಂತರ ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ೯ ಗಂಟೆಗೆ ಸಿಡಿಮದ್ದಿನ ಪ್ರದರ್ಶನ ನಡೆದು, ಗೌರಿ-ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಕಡಬದ ಶ್ರೀ ಗೋಪಾಲಕೃಷ್ಣ ಗೊಂಬೆ ಬಳಗದ ಗೊಂಬೆ ಕುಣಿತ ಹಾಗೂ ಭರ್ತೂರು ಬಾಯ್ಸ್ ತಂಡದ ಪ್ರವೀಣ್, ದರ್ಶನ್ ಇತರ ೧೫ ಮಂದಿ ಯುವಕರಿಂದ ನಾಸಿಕ್ ಬ್ಯಾಂಡ್ ಮತ್ತು ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದ ಚೇತನ್ ತಂಡದಿAದ ಶ್ರೀ ಗಣಪತಿಯಿಂದ ಶತಮಹಿಷಿ ಸಂಹಾರ ಎಂಬ ಕಥಾ ಸಾರಾಂಶದ ಪ್ರದರ್ಶನ ನಡೆಯಿತು.

ಎಸ್.ವಿ.ಎಲ್.ಪ್ರೋ ಡಿ.ಜೆ.ಸೌಂಡ್ಸ್, ಲೈಟಿಂಗ್ಸ್ ಮತ್ತು ಸ್ಟುಡಿಯೋ ಪ್ರದರ್ಶನದೊಂದಿಗೆ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಭಾನುವಾರ ಬೆಳಗ್ಗಿನ ಜಾವ ಕಾಜೂರು ನದಿಯಲ್ಲಿ ವಿಸರ್ಜಿಸಲಾಯಿತು.

ಶನಿವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜಾ ಕಾರ್ಯಕ್ರಮ ಹಾಗೂ ವಿಸರ್ಜನೋತ್ಸವ ಮೆರವಣಿಗೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಕಾರ್ಯದರ್ಶಿ ಕುಮಾರ್, ಪದಾಧಿಕಾರಿಗಳಾದ ಯಶವಂತ್, ಶಿವಕುಮಾರ್ ಮತ್ತಿತರ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಮೆರವಣಿಗೆ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಕುಶಾಲನಗರ ಡಿವೈಎಸ್ಪಿ ಪಿ. ಚಂದ್ರಶೇಖರ್, ಶನಿವಾರಸಂತೆ ಪೊಲೀಸ್ ಠಾಣೆ ವೃತ್ತನಿರೀಕ್ಷಕ ಎಚ್.ಜಿ. ಕೃಷ್ಣರಾಜ್, ಪಿಎಸ್‌ವೈ ಎಚ್.ವೈ. ಚಂದ್ರ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.