ಮಡಿಕೇರಿ, ಅ. ೨೧: ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ತಾಲ್ಲೂಕು ಮಹಿಳಾ ಬಂಟರ ಸಂಘ, ನಗರ ಬಂಟರ ಸಂಘ, ವೀರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ತಾಲೂಕು ಬಂಟರ ಸಂಘದ ಸಹಯೋಗದಲ್ಲಿ ಮಡಿಕೇರಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ತಾ.೨೬ ರಂದು ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ನಡೆಯಲಿದೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ತಾಲೂಕು ಬಂಟರ ಸಂಘದ ಖಜಾಂಚಿ ದಿವೇಶ್ ರೈ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ೩೦ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಮೂರ್ನಾಡು, ಕಗ್ಗೋಡ್ಲು, ತಾಳತ್‌ಮನೆ, ನಾಪೋಕ್ಲು, ಕತ್ತಲೆಕಾಡು, ಗಾಳಿಬೀಡು ಬಂಟರ ಸಂಘದ ಹೋಬಳಿ ಘಟಕಗಳ ಅಧ್ಯಕ್ಷರನ್ನು ಹಾಗೂ ಪ್ರತಿ ಹೋಬಳಿಯಲ್ಲಿರುವ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಇದರೊಂದಿಗೆ ಸ್ವಜಾತಿ ಬಂಧುಗಳ ಸಾಧಕರನ್ನು ಚುನಾಯಿತ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿಯಿತ್ತರು.

ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾ.೨೬ ರಂದು ಬೆಳಗ್ಗೆ ೯.೩೦ ಗಂಟೆಗೆ ಗಾಂಧಿ ಮೈದಾನದ ವೇದಿಕೆಯಲ್ಲಿ ಚಲನಚಿತ್ರ ನಟರಾದ ಸುರೇಶ್ ರೈ ಮತ್ತು ಭವ್ಯ ಶ್ರೀ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಆರ್. ಸದಾಶಿವ ರೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭವು ಅಂದು ಮಧ್ಯಾಹ್ನ ೨.೩೦ ಗಂಟೆಗೆ ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಬಿ.ಆರ್. ಸದಾಶಿವ ರೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷÀ ಸದಾಶಿವ ರೈ, ಉಪಾಧ್ಯಕ್ಷ ವಿಠಲ್ ರೈ, ಗೌರವ ಸಲಹೆಗಾರರಾದ ಹರೀಶ್ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಲೋಕೇಶ್, ಸದಸ್ಯರಾದ ಸಾವಿತ್ರಿ ಉದಯ ಶೆಟ್ಟಿ ಉಪಸ್ಥಿತರಿದ್ದರು.