ನಾಪೋಕ್ಲು, ಅ. ೨೬ : ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಗಾಯಗೊಂಡು, ಹಸು ಸಾವನ್ನಪ್ಪಿದ ಘಟನೆ ಪೇರೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.

ಪೇರೂರು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಅಪ್ಪಚ್ಚಿರ ಹ್ಯಾರಿ ಪೊನ್ನಪ್ಪ ಕಾಡಾನೆ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.

ಹ್ಯಾರಿ ಪೊನ್ನಪ್ಪ ಪೇರೂರು ಗ್ರಾಮದಲ್ಲಿರುವ ತಮ್ಮ ತೋಟದಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುವ ಸಂದರ್ಭ ಪೇರೂರಿನಲ್ಲಿರುವ ಮಚ್ಚೂರ ಮಂದ್ ಸಮೀಪ ಘಟನೆ ನಡೆದಿದೆ.

ಕಾಡಾನೆ ಅಟ್ಟಾಡಿಸಿದ್ದರಿಂದ ತಂತಿ ಬೇಲಿ ತಾಗಿ ಬಿದ್ದ ಹ್ಯಾರಿ ಪೊನ್ನಪ್ಪ ಅವರ ಎದೆಯ ಭಾಗಕ್ಕೆ ಕಾಡಾನೆ ತನ್ನ ದಂತದಿAದ ತಿವಿದಿದೆ. ಸಮೀಪದಲ್ಲಿದ್ದವರು ಭಯದಿಂದ ಚೀರಾಡಿದ್ದರಿಂದ ಆನೆ ಅಲ್ಲಿಂದ ಓಡಿದೆ.

ಇದೇ ಸಂದರ್ಭ ಮಚ್ಚೂರ ಹರೀಶ್ ಬಿದ್ದಪ್ಪ ಎಂಬವರು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕಾಡಾನೆ ತಿವಿದಿದ್ದು ಇಂದು ಹಸು ಸಾವನ್ನಪ್ಪಿದೆ.

ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹ್ಯಾರಿ ಪೊನ್ನಪ್ಪ ಅವರಿಗೆ ಪ್ರಥಮ ಚಿಕಿತ್ಸೆ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ತುರ್ತು ಚಿಕಿತ್ಸೆಗಾಗಿ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಶು ವೈದ್ಯಾಧಿಕಾರಿ ಡಾ. ಚೇತನ್, ಸಿಬ್ಬಂದಿ ಭಾನುವಾರ ಹಸುವಿನ ಮರಣೋತ್ತರ ಪರೀಕ್ಷೆ ಮಾಡಿದರು. ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಕಾಳೇಗೌಡ, ಸಿಬ್ಬಂದಿ ಇದ್ದರು. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. -ದುಗ್ಗಳ ಸದಾನಂದ.