ಮಡಿಕೇರಿ, ಅ. ೨೬: ಈಗಾಗಲೇ ಯೋಗಾಸನದಲ್ಲಿ ದಾಖಲೆ ಮಾಡಿರುವ ಮದೆನಾಡಿನ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಸಿಂಚನ ಇದೀಗ ಮತ್ತೆ ಮೂರು ದಾಖಲೆಗಳನ್ನು ಮಾಡಲು ಮುಂದಾಗಿದ್ದು, ತಾ. ೨೮ರಂದು ಬಿಜಿಎಸ್ ಶಾಲಾ ಆವರಣದಲ್ಲಿ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶ್ರೀ ಆದಿಚುಂಚನಗಿರಿ ಮಠದ ಮೈಸೂರು ಮತ್ತು ಕೊಡಗು ಜಿಲ್ಲಾ ಶಾಖಾ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ; ಸಿಂಚನ ಈಗಾಗಲೇ ಹಲವು ದಾಖಲೆಗಳನ್ನು ಮಾಡಿದ್ದಾಳೆ. ಇದೀಗ ಮತ್ತೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಲು ಮುಂದಾಗಿದ್ದಾಳೆ. ಜಿಲ್ಲೆಯಲ್ಲಿ ಹಲವಾರು ಮಂದಿ ದಾಖಲೆಗಳನ್ನು ಮಾಡಿದ್ದಾರೆ.

ಆದರೆ, ಪುಟ್ಟ ಬಾಲಕಿ ಸಿಂಚನಳಾ ಸಾಧನೆ ವಿಶೇಷವಾದುದಾಗಿದೆ. ತಾ.೨೮ರಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಮುಖ್ಯ ತೀರ್ಪುಗಾರರಾಗಿ ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಡಾ. ಮನಿಶ್ ವೈಷ್ಣೊಯಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಅವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಿಂಚನಳಾ ತಾಯಿ ರೇಣುಕಾ ಮಾತನಾಡಿ; ಈಗಾಗಲೇ ಸಿಂಚನಾ ಒಟ್ಟು ಏಳು ದಾಖಲೆಗಳನ್ನು ಮಾಡಿದ್ದು, ಇದೀಗ ಮತ್ತೆ ಮೂರು ದಾಖಲೆಗಳನ್ನು ಮಾಡಲು ಮುಂದಾಗಿದ್ದಾಳೆ.

ತಾ. ೨೮ ರಂದು ಕಂಡಪೀಡಾಸನ, ಧನುರಾಸನ ಹಾಗೂ ಬಿಂಬಾಸನಗಳಲ್ಲಿ ದಾಖಲೆ ಮಾಡಲಿದ್ದಾಳೆ. ಈ ದಾಖಲೆಯನ್ನು ದೃಢೀಕರಿಸಲು ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಡಾ. ಮನಿಶ್ ವೈಷ್ಣೊಯಿ ಅವರು ಆಗಮಿಸುತ್ತಿದ್ದಾರೆ. ಅಲ್ಲದೆ, ಈ ಹಿಂದೆ ಕೊಡಗು ಪತ್ರಕರ್ತರ ಸಂಘದ ಮೂಲಕ ಪತ್ರಿಕಾಭವನದಲ್ಲಿ ಮಾಡಿದ ಬಿಂಬಾಸನದ ದಾಖಲೆಯ ಪ್ರಮಾಣ ಪತ್ರವನ್ನು ಕೂಡ ಅಂದು ವಿತರಿಸಲಿದ್ದಾರೆ ಎಂದು ತಿಳಿಸಿದರು.

ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಮಾತನಾಡಿ; ಸಿಂಚನ ವಿಶೇಷ ಪ್ರತಿಭೆಯಾಗಿದ್ದು, ಯೋಗದಲ್ಲಿ ಈ ರೀತಿಯ ಸಾಧನೆ ಮಾಡಿದವರು ಜಿಲ್ಲೆಯಲ್ಲಿ ಬೇರೆ ಯಾರು ಇಲ್ಲ. ಅಮ್ಮನ ಪ್ರೋತ್ಸಾಹದೊಂದಿಗೆ ಆಕೆ ಸಾಧನೆ ಮಾಡುತ್ತಿದ್ದು, ಇದು ಒಂದು ವಿಶ್ವ ದಾಖಲೆಯಾಗಲಿದೆ. ಈಕೆ ಇನ್ನಷ್ಟು ಸಾಧನೆ ಮಾಡಲೆಂದು ಹಾರೈಸಿದರು.

ಗೋಷ್ಠಿಯಲ್ಲಿ ಕು. ಸಿಂಚನ, ತಂದೆ ಕೀರ್ತಿಕುಮಾರ್, ಬಿಜಿಎಸ್ ಶಾಲೆಯ ಆಡಳಿತಾಧಿಕಾರಿ ಸುಧಾಕರ್ ಇದ್ದರು.