ಮಡಿಕೇರಿ, ಅ. ೨೬: ಬುದ್ಧ, ಬಸವ ಹಾಗೂ ಡಾ. ಅಂಬೇಡ್ಕರ್ ಅವರ ಚಿಂತನೆ ಸಾಕಾರಗೊಳ್ಳಲು ಮತ್ತು ಆದರ್ಶಗಳು ಅರ್ಥಪೂರ್ಣಗೊಳ್ಳಲು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಚಿಕ್ಕಅಳುವಾರ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಕರೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ೨೦೨೪-೨೫ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರೊಫೆಸರ್ ಗಳಾಗಿ ಬಡ್ತಿ ಹೊಂದಿರುವ ಬೋಧಕ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪೂಜನೀಯವಾಗಿದೆ, ಸಮರ್ಥ ಮತ್ತು ಸಮೃದ್ಧ ರಾಷ್ಟç ನಿರ್ಮಾಣವಾಗಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ದೇಶ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರು ಮಾಡುತ್ತಿರುವ ಬೋಧನೆ ಬಹು ದೊಡ್ಡದು ಎಂದರು.
ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ, ದಲಿತ ಸಂಘರ್ಷ ಸಮಿತಿ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಪದವಿಯ ನಂತರ ಉದ್ಯೋಗಾವಕಾಶಗಳು ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದರೆ ಸಮಾಜದಲ್ಲಿ ಆಗುವ ಬದಲಾವಣೆ’ ಎಂಬ ವಿಷಯದ ಕುರಿತು ಮಕ್ಕಳ ತಜ್ಞ ಡಾ.ನವೀನ್ ಬಿ.ಸಿ. ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣ ಅತಿಮುಖ್ಯ, ಭಾರತೀಯ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಶಿಕ್ಷಣದಿಂದ ಗುರುತಿಸಬಹುದು. ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವದಲ್ಲಿಯೇ ಭಾರತ ೩ನೇ ಸ್ಥಾನದಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಮಂದಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಶಿಕ್ಷಣ ಕ್ಷೇತ್ರ ಖಾಸಗಿ ಸಂಸ್ಥೆಗಳ ಹಿಡಿತದಲ್ಲಿದೆ. ಮುಂದಿನ ದಿನಗಳಲ್ಲಿ ಸಮಾನತೆಯ ಸಮಾಜವನ್ನು ಸೃಷ್ಟಿ ಮಾಡಬೇಕಾದರೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲಿ ಪ್ರಪಂಚದಲ್ಲಿ ನಡೆಯುವ ವಿಚಾರಗಳನ್ನು ತಿಳಿದುಕೊಳ್ಳಬಹುದು. ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಂತಾಗಬೇಕು. ಓದುವ ಅಭ್ಯಾಸ ನಿರಂತರವಾಗಿರಬೇಕು ಮತ್ತು ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು. ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಆ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು. ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಲೀಡಿಂಗ್ ಎಡ್ಜ್ ಅಡ್ವರ್‌ಟೈಸಿಂಗ್ ನಿರ್ದೇಶಕ ಪ್ರಸನ್ನ ಎಡಿಕೇರಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಹಂತದಲ್ಲೂ ಅಡೆತಡೆಗಳಿರುತ್ತದೆ. ಆದ್ದರಿಂದ ಶ್ರಮಪಟ್ಟಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯೋಗವಕಾಶವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಚಿಂತಕ ಇಸಾಖ್ ಖಾನ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಯಕರು, ವಿದ್ಯೆಯಿಂದ ಮಾತ್ರ ಪ್ರಬುದ್ಧ ಸಮಾಜ, ಪ್ರಗತಿಪರ ದೇಶ ನಿರ್ಮಾಣ ಮಾಡಲು ಸಾಧ್ಯ. ವಿದ್ಯೆಯಿಂದ ಪ್ರತಿ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಮಾತನಾಡಿ, ಸಂಘಟನೆಗಳು ಸಾಧಕರನ್ನು ಬೆನ್ನು ತಟ್ಟುವಂತಿರಬೇಕು. ಸಮಾಜಮುಖಿ ಕೆಲಸ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದು ವಿಪರ್ಯಾಸ. ಸರಕಾರಿ ಶಾಲೆಗಳು ನೀಡುವ ಶಿಕ್ಷಣವನ್ನು ಖಾಸಗಿ ಶಾಲೆಗಳು ನೀಡಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದಲ್ಲಿ ನಾವು ಜಯ ಸಾಧಿಸಬೇಕಾದರೆ ಉತ್ತಮ ಶಿಕ್ಷಣ ಅಗತ್ಯ ಎಂದರು.
ದಲಿತ ಸಂಘರ್ಷ ಸಮಿತಿ ಕಳೆದ ೩೫ ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅದಕ್ಕೆ ಕಾರಣಕರ್ತರಾದ ಶಿಕ್ಷಕರನ್ನು ಸನ್ಮಾನಿಸಿ, ಪ್ರೋತ್ಸಾಹಿಸಿಕೊಂಡು ಬಂದಿದೆ. ಇದರೊಂದಿಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಅವರು ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದುವುದರಿಂದ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕವನ್ನು ಓದುವಂತೆ ಸಲಹೆ ನೀಡಿದರು.
ಸಮಾಜ ಸೇವಕರು ಹಾಗೂ ದಾನಿಗಳಾದ ಪ್ರದೀಪ್ ಕರ್ಕೇರ ಹಾಗೂ ದಸಂಸ ಪೊನ್ನಂಪೇಟೆ ತಾಲೂಕು ಸಂಚಾಲಕ ಹೆಚ್.ಆರ್. ಜಗದೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಪ್ನ ಪ್ರಾರ್ಥಿಸಿ, ಶ್ರುತಿ ನಿರೂಪಿಸಿ, ಉಪನ್ಯಾಸಕÀರಾದ ಶ್ರೀಧರ್ ಸ್ವಾಗತಿಸಿ ಮಹಾಲಕ್ಷಿö್ಮ ವಂದಿಸಿದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಬಿಎ, ಬಿಕಾಂ, ಬಿಸಿಎ, ಬಿಎಸ್‌ಸಿ, ಬಿಬಿಎ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ೧೫ ವಿದ್ಯಾರ್ಥಿಗಳನ್ನು ಹಾಗೂ ಪ್ರೊಫೆಸರ್‌ಗಳಾಗಿ ಬಡ್ತಿ ಹೊಂದಿರುವ ಪ್ರೊ. ಮೇಜರ್ ರಾಘವ ಬಿ., ಪ್ರೊ. ತಿಪ್ಪೇಸ್ವಾಮಿ ಇ., ಪ್ರೊ. ಗಾಯತ್ರಿ ದೇವಿ ಎ., ಪ್ರೊ. ಶ್ರೀಧರ್ ಹೆಗಡೆ, ಪ್ರೊ. ನಾಗರಾಜು ಕೆ.ಪಿ., ಪ್ರೊ. ಕೃಷ್ಣ ಎಂ.ಪಿ. ಹಾಗೂ ಪ್ರೊ. ನಯನ ಕಶ್ಯಪ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.