ವೀರಾಜಪೇಟೆ:, ಅ. ೨೬ ಮಹಿಳೆಯರು ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದು, ಶಿಕ್ಷಣದಲ್ಲಿ ಸಾಧನೆಯತ್ತಲೂ ಹೆಚ್ಚು ಗಮನಹರಿಸಬೇಕಾಗಿದೆ. ಆಗ ಮಾತ್ರ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸಲು ಸಾಧ್ಯ ಎಂದು ದುಡಿಯುವ ಮಹಿಳೆಯರ ರಾಜ್ಯ ಸಂಚಾಲಕಿ ಹೆಚ್.ಎಸ್. ಸುನಂದ ಅಭಿಪ್ರಾಯಪಟ್ಟರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ವತಿಯಿಂದ ವೀರಾಜಪೇಟೆ ಶಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ದುಡಿಯುವ ಮಹಿಳೆಯರ ಕೊಡಗು ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದುಡಿಯುವ ಸ್ಥಳಗಳಲ್ಲಿ ಉಸಿರುಗಟ್ಟಿಸುವ ವಾತಾವರಣವನ್ನು ಖಂಡಿಸಿ, ದುಡಿಮೆಯ ಕಾಲಾವಧಿಯನ್ನು ದಿನಕ್ಕೆ ೮ ಗಂಟೆಗೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ, ಮಹಿಳೆಯರ ಕುರಿತು ಸಮಾಜದ ದೃಷ್ಟಿಕೋನ, ಅಭಿರುಚಿ, ಹೆಣ್ಣು ಭ್ರೂಣಹತ್ಯೆ ಮುಂತಾದ ವಿಚಾರಗಳ ಕುರಿತು ಅವರು ಬೆಳಕು ಚೆಲ್ಲಿದರು.

ಸಿಐಟಿಯುನ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಮಹಿಳೆಯರ ದುಡಿಮೆ, ಶ್ರಮ ಪರಿಗಣನೆ ಆಗುತ್ತಿಲ್ಲ. ಪ್ರತ್ಯೇಕವಾಗಿ ಮಹಿಳೆಯರ ಮೇಲಿನ ಯಾವುದೇ ಸ್ವರೂಪದ ದಾಳಿ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ನಿವಾರಿಸಲು, ಶೋಷಣೆ ಹೋಗಲಾಡಿಸಲು ನಮ್ಮ ಸಂಘಟನೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದರು.

ಅAಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ, ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ಮಹಿಳೆಯರ ಗೋಳು ಒಂದೆರಡಲ್ಲ. ಕೆಲಸದ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು ಎಂದರು.

ಈ ಸಂದರ್ಭ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮ, ಆದಿವಾಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಪ್ರೇಮ, ಕಾಫಿ ಕ್ಯೂರಿಂಗ್ ವರ್ಕ್ಸ್ ಜಿಲ್ಲಾಧ್ಯಕ್ಷ ಮಂಜು ಹಾಗೂ ಮುಖಂಡರಾದ ಪುಷ್ಪ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ವೇದಿಕೆಯಲ್ಲಿದ್ದರು. ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಮಹಿಳಾ ಪ್ರಮುಖರು ಪಾಲ್ಗೊಂಡಿದ್ದರು.