ಶನಿವಾರಸಂತೆ: ಅ. ೨೭ : ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶನಿವಾರ ವಾರದ ಸಂತೆಯ ದಿನವಾಗಿದ್ದು ಇದ್ದಕ್ಕಿದ್ದಂತೆ ಸುರಿದ ಮಳೆಗೆ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಶಾಲಾ-ಕಾಲೇಜು ಬಿಡುವ ಸಮಯದಲ್ಲೇ ಮಳೆ ಸುರಿದು ಕೊಡೆ ತರದ ವಿದ್ಯಾರ್ಥಿಗಳು ನೆನೆಯುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.

ಹೋಬಳಿ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದಿಂದಲೇ ನಾಲ್ಕೆöÊದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಹೊಳೆ, ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಮುಂಗಾರು ಮಳೆಗಾಲ ಮುಗಿದು ಹಿಂಗಾರು ಆರಂಭವಾಗಿದೆ. ಜತೆಗೆ ವಾಯುಭಾರ ಕುಸಿತವೂ ಸೇರಿ ಅಧಿಕ ಮಳೆಯಿಂದ ಕೆರೆಕಟ್ಟೆ ತುಂಬಿ ಕೋಡಿ ಹರಿದಿವೆ. ಕಾಜೂರು ಕೆರೆ, ಇಂಟಿನಾಯಕನ ಕೆರೆ, ದೊಡ್ಡಳ್ಳಿ ಕೆರೆ ಮುಂಗಾರು ಮಳೆಗಾಲದಲ್ಲೇ ಭರ್ತಿಯಾಗಿದ್ದವು. ಸಮೀಪದ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರ ದೊಡ್ಡಳ್ಳಿ ಕೆರೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಮೇಗೋಡಿಯಲ್ಲಿ ನೀರು ರಭಸವಾಗಿ ಹರಿದು ಕೊಲ್ಲಿಯ ಮೂಲಕ ಹರಿಯುತ್ತಿದೆ. ಮಳೆಗಾಲದ ಆರಂಭದಲ್ಲಿ ದೊಡ್ಡಳ್ಳಿ ಕೆರೆ ಮಂದಗತಿಯಲ್ಲಿ ತುಂಬಿತ್ತು. ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಕಟ್ಟೆ ತುಂಬಿ ಹರಿಯುತ್ತಿದೆ. ಹರಿವ ನೀರಿನ ರಭಸಕ್ಕೆ ಕೆರೆ ಏರಿಗೆ ಅಳವಡಿಸಿದ್ದ ಮೆಷ್ ನೀರಿನ ರಭಸಕ್ಕೆ ಕಿತ್ತುಹೋಗಿದೆ. ಸಾಕಾಣಿಕೆಯ ಮೀನುಗಳು ಕೋಡಿಯಲ್ಲಿ ಕೊಚ್ಚಿ ಹೋಗಿವೆ. ಹಿಂಗಾರು ಮಳೆ, ಅಕಾಲಿಕ ಮಳೆಗೆ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ. ಕೊಯ್ಲಿಗೆ ಬರುವ ಮೊದಲೇ ಕಾಫಿ, ಕಾಳುಮೆಣಸು, ಭತ್ತದ ಬೆಳೆ ಉದುರುತ್ತಿದ್ದು, ವಿನಾಶದ ಅಂಚಿಗೆ ಸಾಗಿದೆ. “ಋತುಮಾನ ಬದಲಾಗಿ ವರ್ಷವಿಡಿ ಮಳೆ ಸುರಿಯುತ್ತಾ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಬೆಳೆದ ಬೆಳೆ ಕೈಗೆ ಬರುವ ಮೊದಲೇ ನೆಲಕಚ್ಚುತ್ತಿವೆ’’ ಎಂದು ರೈತ ಕಾಜೂರು ಚಂದ್ರಣ್ಣ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.