ಸುAಟಿಕೊಪ್ಪ, ಅ. ೨೮: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ೭ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಜೊತೆಗೆ ಹುಲಿಯ ಸಂಚಾರದ ಆತಂಕ ಸೃಷ್ಟಿಯಾಗಿದ್ದು, ತೋಟದ ಕಾರ್ಮಿಕರು ತೋಟಗಳಲ್ಲಿ ಕೂಲಿ ಕೆಲಸ ನಿರ್ವಹಿಸಲು ಪ್ರಾಣಭಯ ಪಡುವಂತಾಗಿದೆ.
ಕೊಡಗರಹಳ್ಳಿ, ಕೆದಕಲ್, ಹೊರೂರು, ಮೋದೂರು ಕಂಬಿಬಾಣೆ, ಚಿಕ್ಲಿಹೊಳೆ, ೭ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ಸಾವಿರಾರು ಮಕ್ಕಳು ವಿವಿಧ ಭಾಗಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಹುಲಿಯ ಚಲನವಲನ ಆತಂಕ ಸೃಷ್ಟಿಸಿದೆ.
ಈ ವ್ಯಾಪ್ತಿಯಲ್ಲಿ ಹೆಚ್ಚೆಂದರೆ ೧೦ ರಿಂದ ೧೫ ಕಾಡಾನೆಗಳು ಇದ್ದು, ಅವುಗಳನ್ನು ಸೆರೆಹಿಡಿದು ಪಳಗಿಸಬೇಕಾಗಿದೆ. ಸರಕಾರ ಇಲಾಖೆಯ ಮೂಲಕ ಪರಿಹಾರ ಮತ್ತು ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ ಮಾತ್ರಕ್ಕೆ ಆನೆ-ಮಾನವ ಸಂಘರ್ಷ ಮುಗಿಯುವುದಿಲ್ಲ. ಏಕಕಾಲಕ್ಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟವೆಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಂತಹAತವಾಗಿ ತಾತ್ಕಾಲಿಕ ಮತ್ತು ದೀರ್ಘಕಾಲಿನ ಪರಿಹಾರ ಕ್ರಮಗಳನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ತೆಗೆದುಕೊಳ್ಳಬೇಕಾಗಿದೆ.
ಇದೇ ರೀತಿಯಲ್ಲಿ ಹುಲಿ ದಾಳಿ ಮಾಡಿದ ನಂತರ ಅಥವಾ ಸಾವು ನೋವು ಸಂಭವಿಸಿದ ಮೇಲೆ ಹುಲಿಯನ್ನು ಹಿಡಿಯುವ ಕಾರ್ಯಕ್ರಮಗಳಿಂದ ಪ್ರಯೋಜನವಾಗುವುದಿಲ್ಲ. ಬದಲಾಗಿ ಹುಲಿ ಪ್ರತ್ಯಕ್ಷಗೊಂಡಿರುವ ಬಗ್ಗೆ ಮಾಹಿತಿ ಕಲೆಹಾಕಿ ದಾಳಿಯನ್ನು ತಡೆಗಟ್ಟುವ ಕಾರ್ಯಕ್ಕೆ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಂಸದರು, ಜಿಲ್ಲೆಯ ಶಾಸಕರುಗಳು, ಉಸ್ತುವಾರಿ ಸಚಿವರು, ಇಲಾಖೆಯ ನೋಡಲ್ ಅಧಿಕಾರಿ, ಉಸ್ತುವಾರಿ ಕಾರ್ಯದರ್ಶಿ ಗಮನಿಸುವುದು ಅಗತ್ಯವಿದೆ.
ಕೆದಕಲ್ ಹೊರೂರು ಭಾಗ ಸೇರಿದಂತೆ ಚಿಕ್ಲಿಹೊಳೆ ಮತ್ತು ಆನೆಕಾಡು ವ್ಯಾಪ್ತಿಯಲ್ಲಿ ಹುಲಿ ಸಂಚಾರದ ಬಗ್ಗೆ ಮಾತುಗಳು ಕೇಳಿಬಂದಿದ್ದು ಮೋದೂರು, ಹೊರೂರು ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಕಂಡುಬAದಿದೆ. ಈ ಬಗ್ಗೆ ಖಚಿತಪಡಿಸಿರುವ ಈ ವ್ಯಾಪ್ತಿಯ ಉಪ ಅರಣ್ಯ ವಲಯಾಧಿಕಾರಿ ದೇವಯ್ಯ ಅವರು ಇದು ಹುಲಿ ಹೆಜ್ಜೆಯೇ ಆಗಿದ್ದು ಹೊರೂರು ಭಾಗದಿಂದ ಮಡಿಕೇರಿ ಕಡೆ ಸಂಚಾರ ಮಾಡಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮುಕ್ಕಾಟಿರ ಸಂಜಯ್ ಪೊನ್ನಪ್ಪ ಮಾತನಾಡಿ, ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ. ಇದೀಗ ಕಳೆದ ೨ ದಿನಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹುಲಿ ಸಂಚಾರದ ಬಗ್ಗೆ ಸುದ್ದಿ ಕೇಳಿಬಂದಿದ್ದು, ದಾರಿ ತೋಚದಂತಾಗಿದೆ. ಹವಾಮಾನ ವೈಪರಿತ್ಯ, ಅಕಾಲಿಕ ಮಳೆಯಿಂದಾಗಿ ವರ್ಷಕ್ಕೊಮ್ಮೆ ಬರುವ ಫಸಲನ್ನು ನಂಬಿ ಬದುಕುವ ನಾವು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.