ಸೋಮವಾರಪೇಟೆ,ಅ.೨೭: ಸಿ ಮತ್ತು ಡಿ ಜಾಗ, ಸೆಕ್ಷನ್-೪, ಡೀಮ್ಡ್ ಫಾರೆಸ್ಟ್ ಸೇರಿದಂತೆ ಇನ್ನಿತರ ನಿಬಂಧನೆಗಳ ಮೂಲಕ ಅರಣ್ಯ ಇಲಾಖೆ ರೈತರಿಗೆ ಕಿರುಕುಳ ಮುಂದುವರೆಸಿದ್ದು, ಹಲವಷ್ಟು ಬಾರಿ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಅರಣ್ಯ ಇಲಾಖೆಯ ಸಹಿತ ಸರ್ಕಾರದ ವಿರುದ್ಧವೂ ಹೋರಾಟ ನಡೆಸಬೇಕು ಎಂದು ರೈತ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಿದ್ಧತೆ ಕೈಗೊಂಡರು.

ಅದರAತೆ ಪ್ರಾರಂಭಿಕ ಹಂತವಾಗಿ ನ. ೩ರಂದು ಸೋಮವಾರಪೇಟೆಯ ಜೇಸೀ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ, ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮತ್ತೊಮ್ಮೆ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು. ಇದರೊಂದಿಗೆ ಚಳಿಗಾಲದ ಅಧಿವೇಶನ ಸಂದರ್ಭ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಅಧಿವೇಶನದ ಗಮನ ಸೆಳೆಯಲು ತೀರ್ಮಾನಿಸಲಾಯಿತು.

ಈಗಾಗಲೇ ಜಾಗಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು, ಸಂಬAಧಿಸಿದ ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಹೋರಾಟದ ಸ್ವರೂಪ ಬದಲಿಸಿ, ನಿರಂತರ ಪ್ರತಿಭಟನೆ ನಡೆಸಬೇಕೆಂದು ಸಭೆ ತೀರ್ಮಾನಿಸಿತು.

ರೈತರು ತೋಟ ಮಾಡಿರುವ ೫೦ ಸಾವಿರ ಎಕರೆಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ನೇಗಳ್ಳೆಯಲ್ಲಿ ೪೦ ಎಕರೆ, ಕಲ್ಕಂದೂರಿನಲ್ಲಿ ೮೦, ಚೌಡ್ಲುವಿನಲ್ಲಿ ೩೭ ಎಕರೆ, ಕೂತಿಯಲ್ಲಿ ೫೬ ಎಕರೆ, ಕೂಗೂರಿನಲ್ಲಿ ೮೦ ಎಕರೆ ಜಾಗವನ್ನು ಅರಣ್ಯವನ್ನಾಗಿಸುವ ಸಂಚು ನಡೆಯುತ್ತಿದೆ. ಹರಗದಲ್ಲಿ ೫೧೨ ಎಕರೆಯನ್ನು ೫೧೨ ಹೆಕ್ಟೇರ್ ಮಾಡಿದ್ದಾರೆ. ಇದರಿಂದಾಗಿ ೧೫೦೦ ಎಕರೆ ಜಾಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಡೀಮ್ಡ್ ಪಾರೆಸ್ಟ್ ಎಂದು ಅರಣ್ಯಾಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹೇಳಿದರು.

೫೦ ಮರ ಇದ್ದರೆ ಡೀಮ್ಡ್ ಫಾರೆಸ್ಟ್ ಘೋಷಣೆ ಮಾಡಬಹುದು ಎಂಬ ಆದೇಶವಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ರೈತರು ತಮ್ಮ ತೋಟದಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ್ದಾರೆ. ವಿಧಾನಸೌಧದ ಸುತ್ತಮುತ್ತಲಲ್ಲಿ ನೂರಾರು ಮರಗಳಿವೆ. ವಿಧಾನ ಸೌಧವನ್ನೂ ಡೀಮ್ಡ್ ಫಾರೆಸ್ಟ್ ಮಾಡಲು ಅರಣ್ಯ ಇಲಾಖೆ ಮುಂದಾಗುತ್ತದೆಯೇ? ಎಂದು ಪ್ರಶ್ನಿಸಿದ ಸುರೇಶ್, ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದರು.

ಅರಣ್ಯ ಇಲಾಖೆಯವರು ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರ ಜಾಗಕ್ಕೆ ಅತಿಕ್ರಮಣ ಮಾಡಿ ಗಿಡಗಳನ್ನು ಕಡಿದಿದ್ದಾರೆ. ಇದೀಗ ಅರಣ್ಯ ಇಲಾಖೆಯಿಂದ ಸಂತ್ರಸ್ಥ ನಾಣಿಯಪ್ಪ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಇಂತಹ ಸಮಸ್ಯೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಬೆಟ್ಟತ್ತೂರಿನಲ್ಲಿ ಆದಿವಾಸಿ ಜನಾಂಗಕ್ಕೆ ೨ ಎಕರೆ ಜಾಗವನ್ನು ಸರ್ಕಾರ ಆರ್.ಟಿ.ಸಿ. ನೀಡಿದ್ದರೂ ಅರಣ್ಯ ಇಲಾಖೆಯವರು ೨ ಎಕರೆ ಜಾಗವನ್ನೂ ತೆರವು ಮಾಡಿಸಿದ್ದಾರೆ. ನಾವು ಈವರೆಗೆ ಹಲವಷ್ಟು ಬಾರಿ ಹೋರಾಟ, ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಮಸ್ಯೆ ಬಗೆಹರಿದಿಲ್ಲ ಎಂದು ಸುರೇಶ್ ತಿಳಿಸಿದರು.

ಶಾಂತಿಯುತ ಹೋರಾಟದಿಂದ ಈವರೆಗೆ ಪ್ರಯೋಜನವಾಗಿಲ್ಲ. ಹೋರಾಟಕ್ಕೆ ತೀವ್ರತೆ ನೀಡಬೇಕು. ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಬೇಕೆಂದು ಕೊತ್ನಳ್ಳಿ ರಾಜೇಶ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಮಾಡಬೇಕೆಂದು ತೋಳೂರುಶೆಟ್ಟಳ್ಳಿಯ ರಂಜನ್ ಅಭಿಪ್ರಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಕೊಡಗಿಗೆ ಅನ್ಯಾಯವಾದರೆ ಮಂಡ್ಯದಿAದ ಬರುತ್ತೇವೆ ಎಂದು ರೈತ ಸಂಘದವರು ಹೇಳಿದ್ದಾರೆ. ರಾಜ್ಯದಿಂದಲೂ ಬೆಂಬಲ ನೀಡುತ್ತಾರೆ. ಈವರೆಗೆ ಆಡಳಿತ ಮಾಡಿದ ಎಲ್ಲಾ ಪಕ್ಷದವರೂ ರೈತರಿಗೆ ಮೋಸ ಮಾಡಿದವರೇ ಆಗಿದ್ದಾರೆ. ಎಲ್ಲಾ ಪಕ್ಷದ ಶಾಸಕರುಗಳು ವಿಧಾನ ಸೌಧದಲ್ಲಿ ಒಂದಾಗುತ್ತಾರೆ. ಹೋರಾಟ ಎಂದು ಬಂದರೆ ರಾಜಕೀಯ ಬಿಟ್ಟು ಬೀದಿಗೆ ಇಳಿಯಬೇಕು ಎಂದರು.

ಇದೀಗ ಸಿ ಮತ್ತು ಡಿ ಜಾಗದ ಕೇಸ್ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಕಿತ್ತುಹಾಕಿಲ್ವಾ? ಜನಪ್ರತಿನಿಧಿಗಳು ಮನಸ್ಸು ಮಾಡಬೇಕಷ್ಟೇ. ಎಲ್ಲಾ ಪಕ್ಷದವರು ಒಂದಾಗಬೇಕು. ಜನಪ್ರತಿನಿಧಿಗಳಿಗೆ ರೈತರ ಪರ ಕಾಳಜಿ ಇಲ್ಲ. ಮುಂದೆ ರಾಜಕೀಯ ರಹಿತ ಹೋರಾಟ ನಡೆಯಬೇಕು ಎಂದು ದಿನೇಶ್ ಅಭಿಪ್ರಾಯಿಸಿದರು.

ಕೊಡಗಲ್ಲಿ ೪೨ ಗ್ರಾಮಗಳಲ್ಲಿ ಸೆಕ್ಷನ್ ೪, ೧೯ ಗ್ರಾಮಗಳನ್ನು ಸೂಕ್ಷö್ಮ ೫೨ ಗ್ರಾಮಗಳನ್ನು ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸುತ್ತಿದ್ದಾರೆ. ರೈತರು ಜಾಗೃತರಾಗಿರುವುದಕ್ಕೆ ಅರಣ್ಯ ಇಲಾಖೆ ಸುಮ್ಮನಾಗಿದೆ. ಹೊರ ಜಿಲ್ಲೆಯಲ್ಲಿ ಈಗಾಗಲೇ ತೆರವು ಮಾಡುತ್ತಿದ್ದಾರೆ. ಮುಕ್ಕೋಡ್ಲು ಘಟನೆಯಿಂದ ರೈತರ ಶಕ್ತಿ ತೋರಿಸಲಾಗಿದೆ ಎಂದು ಕಾರ್ಯದರ್ಶಿ ದಿವಾಕರ್ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಸರ್ಕಾರ ರೈತರ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಮುಂದಿನ ಪೀಳಿಗೆಗೆ ಭೂಮಿ ಉಳಿಸಬೇಕೆಂದರೆ ಈಗಿನಿಂದಲೇ ಹೋರಾಟ ಮಾಡಬೇಕು. ಕಳೆದ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಅಧಿಕಾರಿಗಳು ವಾಸ್ತವಾಂಶದ ವರದಿ ನೀಡುವುದಾಗಿ ಹೇಳಿದ್ದರು. ಆದರೂ ನೋಟೀಸ್ ನೀಡಲಾಗುತ್ತಿದೆ. ಒಗ್ಗಟ್ಟಿನ ಹೋರಾಟ ಇಲ್ಲದಿದ್ದರೆ ನಮ್ಮ ಬುಡಕ್ಕೆ ನಾವೇ ಬೆಂಕಿ ಇಟ್ಟುಕೊಂಡAತೆ ಆಗುತ್ತದೆ. ನಮ್ಮ ಜಾಗ ನಮಗೆ ಉಳಿಸಿಕೊಡಿ ಎಂಬ ಹೋರಾಟ ಮಾಡಬೇಕು ಎಂದರು.

ಚೌಡ್ಲು ಗ್ರಾಮದ ಜಂಟಿ ಸರ್ವೆ ಮಾಡುತ್ತೇವೆ. ಗ್ರಾಮಸ್ಥರಿಗೆ ನೋಟೀಸ್ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಯಾವುದೇ ಮಾಹಿತಿ ನೀಡದೇ ಅರಣ್ಯ ಇಲಾಖೆಯವರು ಸರ್ವೆಗೆ ಬರುತ್ತಿದ್ದಾರೆ ಎಂದು ಚೌಡ್ಲು ಗ್ರಾಮಸ್ಥ ದಿನೇಶ್ ಹೇಳಿದರು. ಸರ್ವೆಗೆ ತಡೆಯೊಡ್ಡಿದರೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಮತ್ತೆ ಹಳೆಯ ವರದಿಯನ್ನೇ ಸಲ್ಲಿಸುವ ಸಂಭವವಿದೆ. ಈ ಬಗ್ಗೆ ಇರುವ ಗೊಂದಲ ಸರಿಪಡಿಸಬೇಕು ಎಂದು ಬನ್ನಳ್ಳಿ ಸತೀಶ್ ಹೇಳಿದರು.

ಸಮಿತಿಯ ಸಂಚಾಲಕ ದೀಪಕ್ ಮಾತನಾಡಿ, ಅಧಿಕಾರಿಗಳು ಅವರಿಗೆ ಬೇಕಾದ ದಾಖಲೆಗಳನ್ನು ಮಾಡಿಟ್ಟುಕೊಂಡಿದ್ದಾರೆ. ಹೋರಾಟದ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕು. ಸದ್ಯದ ಮಟ್ಟಿಗೆ ನ್ಯಾಯಾಲಯದಲ್ಲಿ ಹೊರಾಟ ಮಾಡದೇ ಸಂಘಟನಾತ್ಮಕವಾಗಿ ಹೋರಾಟ ಮಾಡಿ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು ಎಂದು ಅಭಿಪ್ರಾಯಿಸಿದರು.

ಬೆಳೆಗಾರರ ಸಂಘದ ಅಧ್ಯಕ್ಷ ಎಡದಂಟೆ ಲವ ಮಾತನಾಡಿ, ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸಬೇಕೆಂದರು. ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಸೇರಿದಂತೆ ೫೦ಕ್ಕೂ ಅಧಿಕ ಗ್ರಾಮಗಳ ಗ್ರಾಮ ಸಮಿತಿ ಮುಖಂಡರು ಇದ್ದರು.