ಮಡಿಕೇರಿ, ಅ. ೨೮: ತಲಕಾವೇರಿ ಕ್ಷೇತ್ರದ ಮೆಟ್ಟಿಲುಗಳಿಗೆ ಅಳವಡಿಸಿರುವ ನೆಲಹಾಸು (ಟೈಲ್ಸ್) ಅನ್ನು ದಿಢೀರ್ ತೆರವು ಮಾಡಿರುವ ಬಗ್ಗೆ ಕ್ಷೇತ್ರದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಕಿರು ಸಂಕ್ರಮಣ ಕಳೆದು, ಮಳೆ ನಿಂತ ನಂತರ ಕಾಮಗಾರಿ ಆರಂಭಿಸಬೇಕೆAದು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ವರ್ಷಗಳ ಹಿಂದೆ ತಲಕಾವೇರಿ ದೇವಾಲಯದ ಪುನರ್ ನಿರ್ಮಾಣಗೊಂಡು ಬ್ರಹ್ಮಕುಂಡಿಕೆ ತನಕ ನೆಲಹಾಸು ಅಳವಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ನೆಲಹಾಸಿನ ನಡುವೆ ನೀರು ನುಗ್ಗಿ ಭೋಜನಾಲಯ ಹಾಗೂ ಶೌಚಾಲಯದ ಭಾಗಗಳತ್ತ ಸೋರಿಕೆಯಾಗುತ್ತಿತ್ತು. ಈ ಹಿನ್ನೆಲೆ ಇದರ ದುರಸ್ತಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಗುತ್ತಿಗೆದಾರರು ಏಕಾಏಕಿ ನೆಲಹಾಸನ್ನು ತೆಗೆದು ತೊಂದರೆ ಉಂಟುಮಾಡಿದ್ದಾರೆ. ಮಳೆಯ ನಡುವೆ ಕೆಲಸ ಮಾಡುತ್ತಿರುವುದರಿಂದ ಭಕ್ತರ ಓಡಾಟಕ್ಕೆ ಸಮಸ್ಯೆ ಉಂಟಾಗುತ್ತದೆ. ಕಾವೇರಿ ಜಾತ್ರೆ ಇರುವ ಕಾರಣ ಕ್ಷೇತ್ರಕ್ಕೆ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಮಳೆ ಬಂದ ಸಂದರ್ಭ ನೀರು ನೆಲಹಾಸು ಸೇರಿ ಭೋಜನಾಲಯಕ್ಕೆ ಸೋರುತ್ತಿದೆ. ಈ ಸಂಬAಧ ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.