ಸಿದ್ದಾಪುರ, ಅ. ೩೧ : ಕಾಫಿ ತೋಟದೊಳಗೆ ಅಕ್ರಮ ಪ್ರವೇಶ ಮಾಡಿ ಅವಕಾಡೊ ಗಿಡಗಳ ರೆಂಬೆಗಳನ್ನು ಹಾಗೂ ಚಿಗುರುಗಳನ್ನು ಕಡಿದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಸಂಬAಧಿಸಿದ ೯ ಮಂದಿಯನ್ನು ಬಂಧಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿಬೆಟ್ಟ ಟಾಟಾ ಸಂಸ್ಥೆಗೆ ಸೇರಿದ ಕೋಟೆಬೆಟ್ಟ ಕಾಫಿ ತೋಟದ ಒಳಗೆ ಬೆಳೆಸಿದ್ದ ಅವಕಾಡೊ ಗಿಡಗಳ ರೆಂಬೆ ಹಾಗೂ ಚಿಗುರುಗಳನ್ನು ತಡರಾತ್ರಿ ಕತ್ತರಿಸಿ ತೆಗೆದು ಚೀಲದಲ್ಲಿ ತುಂಬಿಸುವ ವೇಳೆಯಲ್ಲಿ ಕಾಫಿ ತೋಟದೊಳಗೆ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಅನುಮಾನಗೊಂಡು ಇಬ್ಬರನ್ನು ಸೆರೆಹಿಡಿದು ಸಂಸ್ಥೆಯ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಇವರನ್ನು ವಿಚಾರಣೆ ನಡೆಸುವ ಸಂದರ್ಭ ಒಟ್ಟು ೯ ಮಂದಿ ಜೀಪ್ ಮತ್ತು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಕಾಫಿ ತೋಟದೊಳಗೆ ನುಗ್ಗಿ ಗಿಡಗಳ ಚಿಗುರುಗಳನ್ನು ಮುರಿದಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪರಾರಿಯಾಗಿದ್ದ ಏಳು ಮಂದಿಯ ಹೆಸರುಗಳನ್ನು ಆರೋಪಿಗಳು ತಿಳಿಸಿದ್ದಾರೆ. ಬಳಿಕ ಅವಕಾಡೊ ಗಿಡಗಳಿಂದ ಮುರಿದ ಚಿಗುರುಗಳನ್ನು ಮತ್ತು ರೆಂಬೆಗಳನ್ನು ಸಿಬ್ಬಂದಿಗಳು ವಶಪಡಿಸಿ ಕೊಂಡು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ಸಂಪತ್ ಪಿ.ಎಂ. ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಕಾಫಿ ತೋಟದೊಳಗೆ ಅಕ್ರಮ ಪ್ರವೇಶ ಮಾಡಿದ ಪ್ರಕರಣ ಸಂಬAಧಿಸಿ ಮತ್ತು ಅವಕಾಡೊ ಗಿಡಗಳನ್ನು ಮುರಿದು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿದ ಆರೋಪದಡಿಯಲ್ಲಿ ನಂಜರಾಯಪಟ್ಟಣ ಮತ್ತು ವಾಲ್ನೂರು ನಿವಾಸಿಗಳಾದ ಕಿರಣ, ಮನೋಜ್, ಸ್ವಾಗತ್, ರಾಶೀಕ್, ಸತ್ತಾರ್, ಸಕೀರ್, ವಿನೋದ್, ಜಯಕುಮಾರ್, ಪ್ರಮೋದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.