ಪೆರಾಜೆ, ಅ. ೩೧: ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೋವಿಯಿಂದ ಗುಂಡು ಸಿಡಿದು, ವ್ಯಕ್ತಿಯೋರ್ವರ ಕಾಲಿಗೆ ಗಾಯಗೊಂಡ ಘಟನೆ ಮಡಿಕೇರಿ ತಾಲೂಕಿನ ಚೆಂಬು ಸಮೀಪದಲ್ಲಿ ನಡೆದಿದೆ. ಚೆಂಬು ಗ್ರಾಮದ ಕೃಷಿಕ ಪುರುಷೋತ್ತಮ (೪೭) ಗಾಯಗೊಂಡವರು. ಪುರುಷೋತ್ತಮ ಅವರು ಕೃಷಿಕರಾಗಿದ್ದು, ತೋಟಕ್ಕೆ ಹಂದಿಗಳ ಕಾಟದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಸಂಬAಧಿಕರ ಜೊತೆ ತೋಟಕ್ಕೆ ಕಾಡಿನ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಯಾರೋ ಕಾಡು ಪ್ರಾಣಿಗಳ ಬೇಟೆಗೆಂದು ಕೋವಿಯ ಟ್ರಿಗರನ್ನು ಸೇರಿಸಿ ಕೋವಿಗೆ ದಾರ ಕಟ್ಟಿ ದಾರಿಗೆ ಅಡ್ಡ ಕಟ್ಟಿದ್ದರು. ಅದನ್ನು ಪುರುಷೋತ್ತಮ ಅವರು ಗಮನಿಸದೇ ಕಾಲಿನಿಂದ ಎಡವಿದ್ದು ಕೂಡಲೇ ಕೋವಿಯಿಂದ ಗುಂಡು ಹಾರಿ ಅವರ ಬಲಗಾಲಿನ ಮಂಡಿಗೆ ತಾಗಿ ತೀವ್ರ ಗಾಯವಾಗಿದೆ. ಗಾಯಗೊಂಡ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. - ಗಿರೀಶ್ ಪೆರಾಜೆ