ಮಡಿಕೇರಿ, ನ. ೪: ಕರ್ನಾಟಕ ರಕ್ಷಣಾ ವೇದಿಕೆ (ಹೆಚ್. ಶಿವರಾಮೇಗೌಡ ಬಣ) ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಬಿ.ಎ. ದಿನೇಶ್ ಶೆಟ್ಟಿ ಆಯ್ಕೆಗೊಂಡಿದ್ದಾರೆ ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರು ಮಾಹಿತಿ ನೀಡಿದರು.

ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಸಂಘಟನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದು, ಜಿಲ್ಲಾ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಇದೀಗ ಜಿಲ್ಲಾಧ್ಯಕ್ಷನಾಗಿ ಆಯ್ಕೆಗೊಂಡಿದ್ದು, ಕೊಡಗಿನಲ್ಲಿ ಕನ್ನಡ ಪರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು.

ನೆಲ, ಜಲ ಉಳಿವಿಗೆ ಬದ್ಧನಾಗಿದ್ದು, ಹೋರಾಟಕ್ಕೆ ಸಿದ್ಧರಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ನೇಮಿಸಿ ಕನ್ನಡಿಗರ ಪರ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸದಸ್ಯ ಗೋವಿಂದರಾಜ್ ದಾಸ್ ಮಾತನಾಡಿ, ೨೦೦೫ ರಿಂದ ಕೊಡಗಿನಲ್ಲಿಯೂ ಸಂಘಟನೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ವಲಸಿಗರ ಹಾವಳಿಯಿಂದ ಕರ್ನಾಟಕದಲ್ಲಿ ಕನ್ನಡಿಗರು ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ತಲೆದೋರಿದೆ. ಕನ್ನಡಿಗರ ಹಿತ ಕಾಯಲು ಸಂಘಟನೆ ಸದಾ ಬದ್ಧ ಎಂದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ವೀರಾಜಪೇಟೆ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ರವಿಗೌಡ, ಉಪಾಧ್ಯಕ್ಷ ಟಿ.ಸಿ. ನಾಗೇಶ್ ಹಾಜರಿದ್ದರು.