ಸೋಮವಾರಪೇಟೆ, ನ. ೫: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನಡೆದ ಮಂಡಲ ಬಿಜೆಪಿ ಎಸ್.ಸಿ. ಮೋರ್ಚಾದ ಸಭೆಯಲ್ಲಿ, ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ದಲಿತ ಸಮುದಾಯದ ೨೦ಕ್ಕೂ ಅಧಿಕ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭ ಮಾತನಾಡಿದ ಅಪ್ಪಚ್ಚು ರಂಜನ್, ದೇಶದ ರಾಷ್ಟçಪತಿಗಳನ್ನಾಗಿ ದಲಿತ ಸಮುದಾಯದ ಮಹಿಳೆಯೋರ್ವರನ್ನು ಆಯ್ಕೆ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿ ಎಲ್ಲರ ಜೊತೆ ಎಲ್ಲರ ವಿಕಾಸ ಎಂಬ ಸಿದ್ಧಾಂತದAತೆ ನಡೆದುಕೊಂಡಿದೆ. ಕೆಲ ಪಕ್ಷಗಳು ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆಯೇ ವಿನಃ ಯಾವುದೇ ಪ್ರಾತಿನಿಧ್ಯವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು ಎಂಬುದು ಜನತೆಗೆ ಮನವರಿಕೆಯಾಗುತ್ತಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಪ್ರತಿ ಗ್ರಾಮಗಳಲ್ಲೂ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸುವ ಮೂಲಕ ಸರ್ವಋತು ರಸ್ತೆಗಳನ್ನಾಗಿ ಮಾಡಿತ್ತು. ಬಜೆಗುಂಡಿಯAತಹ ಗ್ರಾಮದಲ್ಲಿ ಸಂಪೂರ್ಣವಾಗಿ ಕಾಂಕ್ರಿಟ್ ರಸ್ತೆ ಮಾಡಿರುವುದರಿಂದ ಬಡವರು, ಕೂಲಿಕಾರ್ಮಿಕರಿಗೆ ಅನುಕೂಲ ಒದಗಿಸಿದೆ ಎಂದರು.

ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಮೆಚ್ಚಿ ಹಲವರು ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಕಾರ್ಯಕರ್ತರ ಪಕ್ಷವಾಗಿದ್ದು, ತಳಮಟ್ಟದ ಕಾರ್ಯಕರ್ತರಿಂದಾಗಿ ಪಕ್ಷ ಬಲಿಷ್ಠವಾಗಿದೆ. ಪಕ್ಷವನ್ನು ಇನ್ನಷ್ಟು ಸಂಘಟಿಸುವ ಮೂಲಕ ಮುಂದಿನ ಚುನಾವಣೆಗಳಿಗೆ ಸಿದ್ಧಗೊಳಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರ ಪಾತ್ರ ಅಪಾರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಮಂಡಲ ಎಸ್.ಸಿ. ಮೋರ್ಚಾದ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೋರ್ಚಾದ ಸಲಹೆಗಾರ ಗೋವಿಂದರಾಜ್ ಅವರು, ಇತರ ಪಕ್ಷಗಳು ದಲಿತರನ್ನು ಚುನಾವಣೆ ಸಂದರ್ಭ ಮಾತ್ರ ಬಳಸಿಕೊಳ್ಳುತ್ತವೆಯೇ ಹೊರತು ನಂತರ ಕಡೆಗಣಿಸುತ್ತಿವೆ. ಬಿಜೆಪಿ ಪಕ್ಷದಲ್ಲಿ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಗುತ್ತಿದೆ. ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಿಸಿದರು.

ಮಂಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವ ಮೂಲಕ ಬಲ ತುಂಬಬೇಕು. ಪಕ್ಷದಿಂದ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಎಲ್ಲಾ ಕಾರ್ಯಕರ್ತರೂ ಜೊತೆಗೂಡಬೇಕೆಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಅನಂತ್‌ಕುಮಾರ್, ರೈತ ಮೋರ್ಚಾ ಕಾರ್ಯದರ್ಶಿ ಶರತ್‌ಚಂದ್ರ, ಓಬಿಸಿ ಮೋರ್ಚಾದ ರವಿ, ಮಂಡಲ ಪ್ರಧಾನ ಕಾರ್ಯದರ್ಶಿ ಸೋಮೇಶ್, ನಿರಂಜನ್, ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ತಿಮ್ಮಪ್ಪ ನಾಯಕ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ಕಿಟ್ಟು ಬಜೆಗುಂಡಿ, ಕೆ.ಎನ್. ಹೂವಯ್ಯ, ತಾಲೂಕು ಉಪಾಧ್ಯಕ್ಷ ಕೆಂಚೇಶ್ವರ್ ಸೇರಿದಂತೆ ಇತರರು ಇದ್ದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಅರಣ್ಯ ಹಕ್ಕು ಸಮಿತಿಯ ಮೂಲಕ ೪೦೦ಕ್ಕೂ ಅಧಿಕ ಬಡ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ಒದಗಿಸಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಸ್ಥಳೀಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮ, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ಸುರೇಶ್, ಪದಾಧಿಕಾರಿಗಳಾದ ಪ್ರಕಾಶ್, ಎಸ್. ಹರೀಶ್, ಗೌತಮ್, ಎನ್. ಹರೀಶ್, ಮಂಜು, ಲತಾ, ರಕ್ಷಿತ್, ಅರುಣ್ ಸೇರಿದಂತೆ ಇತರರು ಇದ್ದರು.