ಸುಂಟಿಕೊಪ್ಪ, ನ. ೫: ರಸ್ತೆ ದಾಟುವ ಸಂದರ್ಭ ದ್ವಿಚಕ್ರ ವಾಹನವೊಂದು ಪಾದಚಾರಿಗೆ ಡಿಕ್ಕಿಗೊಳಿಸಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ ೨ ದ್ವಿಚಕ್ರ ವಾಹನ ಸೇರಿದಂತೆ ಅಂಗಡಿ ಮಳಿಗೆಯ ಸಾಮಗ್ರಿಗಳನ್ನು ಜಖಂಗೊಳಿಸಿರುವ ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ೭.೩೦ರ ಸಂದರ್ಭದಲ್ಲಿ ನಾರಾಯಣ (೫೦) ಎಂಬಾತ ರಸ್ತೆ ದಾಟುತ್ತಿದ್ದ ಸಂದರ್ಭ ಗದ್ದೆಹಳ್ಳ ಬಳಿಯಿಂದ ಪಟ್ಟಣಕ್ಕೆ ದ್ವಿಚಕ್ರ ವಾಹನ (ಕೆಎ೧೨ ಎಕ್ಸ್ ೬೭೬೪) ಸವಾರಿ ಮಾಡುತ್ತಿದ್ದ ಸಿಯಾಬ್ (೨೫) ಡಿಕ್ಕಿಪಡಿಸಿದ್ದಾನೆ. ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಬಾರದೆ ಹೆದ್ದಾರಿ ಬದಿಯ ಮಳಿಗೆಯ ಮುಂಭಾಗದಲ್ಲಿ ಇರಿಸಲಾಗಿದ್ದ ಸಿಂಟೆಕ್ಸ್ ಟ್ಯಾಂಕ್‌ಗಳು ಹಾಗೂ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಮತ್ತೊಂದು ದ್ವಿಚಕ್ರ ಸ್ಕೂಟಿಗೆ ಡಿಕ್ಕಿಗೊಳಿಸಿದ್ದು, ಮುಂಭಾಗದಲ್ಲಿಯೇ ಇದ್ದ ಖಾಲಿ ಮಳಿಗೆಯ ಕಟ್ಟೆಗೆ ಡಿಕ್ಕಿ ಹೊಡೆದು ನಿಂತಿದೆ. ನಾರಾಯಣ ಅವರಿಗೆ ಸಣ್ಣ ಪ್ರಮಾಣದಲ್ಲಿ ತಲೆ ಮತ್ತು ಕಾಲುಗಳಿಗೆ ಗಾಯವುಂಟಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ಸವಾರನಿಗೂ ತಲೆ, ದೇಹದ ಭಾಗಗಳಿಗೆ ಗಾಯವುಂಟಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.