ಮಡಿಕೇರಿ, ನ. ೬: ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೊಡಗು ಗೌಡ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವ ಸಂಚಾಲಕ ಅಮೆಮನೆ ಸುರೇಶ್, ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಪೊನ್ನಣ್ಣ ಅವರನ್ನು ಸಚಿವರನ್ನಾಗಿ ಮಾಡುವಂತೆ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಡಗಿನ ಮೂವರು ಸಚಿವರಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಅಪ್ಪಚ್ಚು ರಂಜನ್ ಅಲ್ಪಾವಧಿಗೆ ಸಚಿವರಾಗಿದ್ದು ಹೊರತುಪಡಿಸಿ ಯಾರೂ ಕೂಡ ಬಳಿಕ ಸಚಿವರಾಗಲು ಸಾಧ್ಯವಾಗಿರಲಿಲ್ಲ. ಪೊನ್ನಣ್ಣ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಕಾನೂನು ಪಾಂಡಿತ್ಯದಿAದ ಸಮಸ್ಯೆಗಳನ್ನು ಕೊನೆಗಾಣಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬೇರೆ ಜಿಲ್ಲೆಯ ಸಚಿವರು ಕೇವಲ ಸಭೆಗೆ ಸೀಮಿತವಾಗಿದ್ದು, ಕೊಡಗಿನ ಶಾಸಕರಿಗೆ ಈ ಬಾರಿ ಅವಕಾಶ ನೀಡಬೇಕು. ಮಡಿಕೇರಿ ಕ್ಷೇತ್ರ ಮಂತರ್ ಗೌಡ ಅವರಿಗೂ ಸ್ಥಾನ ದೊರೆತರೂ ಖುಷಿಯ ವಿಚಾರ ಎಂದರು.

ಪ್ರಧಾನ ಸಂಚಾಲಕ ಪರಮಲೆ ಗಣೇಶ್ ಮಾತನಾಡಿ, ಕೊಡಗಿನ ಮೂಲ ಸಮಸ್ಯೆಗಳು ಪೊನ್ನಣ್ಣ ಅವರಿಗೆ ತಿಳಿದಿದೆ. ಪೊನ್ನಣ್ಣ ಅವರು ಮೂಲತಃ ಕೊಡಗಿನವರು ಎಂಬ ಕಾರಣಕ್ಕೆ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ನಾವು ಸಲ್ಲಿಸಿದ್ದೇವೆ. ಪೊನ್ನಣ್ಣ ಉಸ್ತುವಾರಿ ಸಚಿವರಾದರೆ ಜಿಲ್ಲೆಗೆ ಸಹಕಾರಿ ಎಂದು ಪ್ರತಿಪಾದಿಸಿದರು.

ಗೋಷ್ಠಿಯಲ್ಲಿ ಸಂಚಾಲಕ ಪಟ್ಟಡ ದೀಪಕ್, ಸಹಸಂಚಾಲಕರಾದ ಕಾಳೇರಮ್ಮನ ಕುಮಾರ್, ಪೂಜಾರಿರ ಪ್ರದೀಪ್ ಕುಮಾರ್, ಬಾಳಾಡಿ ಪ್ರತಾಪ್ ಕುಮಾರ್ ಹಾಜರಿದ್ದರು.