ಮಡಿಕೇರಿ, ನ. ೬ : ಮೂರ್ನಾಡಿನಲ್ಲಿಂದು ಎಲ್ಲೆಡೆ ಕನ್ನಡದ ಕಂಪು ಪಸರಿಸಿತ್ತು. ಎತ್ತ ನೋಡಿದರೂ ಕನ್ನಡದ ಬಾವುಟ ರಾರಾಜಿಸುತ್ತಿತ್ತು. ಆಕರ್ಷಕ ಮೆರವಣಿಗೆ, ಕನ್ನಡ ನಾಡು ನುಡಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಕನ್ನಡ ಹಬ್ಬ ಮೇಳೈಸಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಹಾಗೂ ಮೂರ್ನಾಡು ಹೋಬಳಿ ಘಟಕ, ಮೂರ್ನಾಡು ಗ್ರಾಮ ಪಂಚಾಯಿತಿ, ಮೂರ್ನಾಡು ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಮೂರ್ನಾಡಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಶಾಲಾ - ಕಾಲೇಜುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕನ್ನಡ ಹಬ್ಬ ಕನ್ನಡಾಭಿಮಾನಿಗಳನ್ನು ರಂಜಿಸಿತು.

ಕನ್ನಡ ಹಬ್ಬದ ಪ್ರಯುಕ್ತ ಬೆಳಿಗ್ಗೆ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಳಿಯಿಂದ ಕೊಂಡAಗೇರಿ ಜಂಕ್ಷನ್‌ವರೆಗೆ ಕನ್ನಡಾಂಬೆಯ ಭಾವಚಿತ್ರವನ್ನೊಳಗೊಂಡ ಮೆರವಣಿಗೆ ನಡೆಯಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಮೆರವಣಿಗೆಗೆ ಚಾಲನೆ ನೀಡಿದರು. ಗೊಂಬೆ ಕುಣಿತ, ಡೊಳ್ಳು ಕುಣಿತ, ಶಾಲಾ ಮಕ್ಕಳ ಬ್ಯಾಂಡ್, ದಫ್ ಕುಣಿತ, ಎನ್‌ಸಿಸಿ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಮಹನೀಯರ ವೇಷ ಧರಿಸಿದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಟ್ಟಿದ್ದ ವಿದ್ಯಾರ್ಥಿ - ವಿದ್ಯಾರ್ಥಿನಿಯರು, ಕಳಸ ಹೊತ್ತ ಮಹಿಳೆಯರು ಹಾಗೂ ಕನ್ನಡಾಭಿಮಾನಿಗಳನ್ನು ಒಳಗೊಂಡು ನಡೆದ ಮೆರವಣಿಗೆ ಕೊಂಡAಗೇರಿ ಜಂಕ್ಷನ್‌ವರೆಗೆ ತೆರಳಿ ಅಲ್ಲಿಂದ ಪಿ.ಎಂ.ಶ್ರೀ ಶಾಲೆಯತ್ತ ಮರಳಿ ಸಮಾಪ್ತಿಗೊಂಡಿತು.

ಕನ್ನಡ ಉಸಿರಾಗಬೇಕು - ಮಂತರ್ ಗೌಡ

ಮೆರವಣಿಗೆಯ ಬಳಿಕ ಪಿ.ಎಂ.ಶ್ರೀ ಶಾಲಾ ಆವರಣದಲ್ಲಿ ರಾಷ್ಟç ಧ್ವಜಾರೋಹಣವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು. ಬಳಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು. ಕನ್ನಡವನ್ನು ರಕ್ಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಕನ್ನಡದ ಮೇಲಿನ ಅಭಿಮಾನ ಒಂದು ದಿನಕ್ಕೆ ಅಥವಾ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಮ್ಮೊಳಗೆ ಇರಬೇಕು. ಕನ್ನಡ ಭಾಷೆ ನಾಡು ಸಂಸ್ಕೃತಿಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ನುಡಿದರು.

ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಮಾತನಾಡಿ ಕನ್ನಡ ನಾಡಿನ ಸಂಸ್ಕೃತಿ ಪರಂಪರೆ ಬಹಳ ವಿಶೇಷವಾದ ಸಂಸ್ಕೃತಿ ಪರಂಪರೆಯಾಗಿದೆ. ಸದಾ ಕನ್ನಡವನ್ನು ಮಾತನಾಡುವುದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ನಾಡ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಕನನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಹಬ್ಬವನ್ನು ನಿರಂತರವಾಗಿ ಆಚರಿಸುತ್ತಾ ಬರುತ್ತಿದ್ದು, ಕನ್ನಡ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಕನ್ನಡ ರಾಜ್ಯೋತ್ಸವ ಮಹತ್ವ ಹಾಗೂ ಕನ್ನಡ ನಾಡು ನುಡಿಯ ಬಗ್ಗೆ ಮೂರ್ನಾಡು ಎಂ.ಇ.ಎಸ್. ಪ್ರೌಢಶಾಲೆಯ ಕನ್ನಡ ಶಿಕ್ಷಕ ಎಸ್.ಡಿ. ಪ್ರಶಾಂತ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾನವ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಮೂರ್ನಾಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎನ್. ಪುಷ್ಪಾವತಿ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕಸಾಪ ಗೌರವ ಕಾರ್ಯದರ್ಶಿಗಳಾದ ಮುನೀರ್ ಅಹ್ಮದ್, ರೇವತಿ ರಮೇಶ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟçಪ್ರಶಸ್ತಿ ವಿಜೇತ ನಿರ್ಮಾ ಪಕಿ ಹಾಗೂ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶೋಧ ಪ್ರಕಾಶ್ ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕೆಂದರು. ಶಾಸಕ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರಾದ ಉಮ್ಮಯ, ಮಾಳಿಗೆಮನೆ ವೆಂಕಟೇಶ್, ಹಸನ್, (ಮೊದಲ ಪುಟದಿಂದ) ಚಂದ್ರಾವತಿ, ಕಟ್ಟೆಮನೆ ಪ್ರೇಮ ಗಣೇಶ್, ತೇಜಸ್ ನಾಣಯ್ಯ, ಬೋಳ್ತಜಿರ ಅಶೋಕ್, ಸಿ.ಆರ್. ಪ್ರಮೀಳ ಮತ್ತಿತರರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮೊಹಮ್ಮದ್ ಶಾಹಿಲ್, ಲತಾಕ್ಷಾ ರೈ, ಕೆ.ವಿ. ಕಲ್ಪನಾ, ಹೆಚ್.ಆರ್. ದೀಪ್ತಿ ಇವರುಗಳನ್ನು ಗೌರವಿಸಲಾಯಿತು. ಸ್ಮರ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪಿ.ಎಂ.ಶ್ರೀ ಶಾಲೆ ವಿದ್ಯಾರ್ಥಿಗಳು ರೈತಗೀತೆ ಹಾಡಿದರು.

ಮೂರ್ನಾಡು ವಿದ್ಯಾಸಂಸ್ಥೆ ವಿದ್ಯಾರ್ಥಿðಗಳು ನಾಡಗೀತೆ ಹಾಡಿದರು.

ಮೂರ್ನಾಡು ಪದವಿ ಕಾಲೇಜು ಉಪನ್ಯಾಸಕಿ ಕಲ್ಪನಾ ಸಾಮ್ರಾಟ್, ಪಿ.ಎಂ.ಶ್ರೀ ಶಾಲೆ ಶಿಕ್ಷಕ ರಾಜೇಶ್ ನಿರೂಪಿಸಿದರು. ಮೂರ್ನಾಡು ಪ್ರೌಢಶಾಲೆ ಶಿಕ್ಷಕಿ ಮಂಗಳ ಸ್ವಾಗತಿಸಿ, ಪಿ.ಎಂ.ಶ್ರೀ ಶಾಲೆ ಶಿಕ್ಷಕಿ ರೋಹಿಣಿ ವಂದಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಜಲಜಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಾಜ್ಯ ಕೃಷಿ ಪ್ರಶಸ್ತಿ ವಿಜೇತರಾದ ಮಠದಮನೆ ಧನಂಜಯ ಉಪಸ್ಥಿತರಿದ್ದರು.