ಪೊನ್ನಂಪೇಟೆ, ನ. ೬: ಪೊನ್ನಂಪೇಟೆ- ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಜೋಡುಬೀಟಿ ಗ್ರಾಮದಲ್ಲಿರುವ ಬಿ.ಡಿ. ಹರೀಶ್ ಎಂಬವರಿಗೆ ಸೇರಿದ ದಿನಸಿ ಹಾಗೂ ನಂದಿನಿ ಹಾಲಿನ ಅಂಗಡಿಯಲ್ಲಿ ಇರಿಸಿದ್ದ ಹಾಲಿನ ಪ್ಯಾಕೆಟ್ಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿರುವ ಘಟನೆ ನಡೆದಿದೆ.
ತಾ. ೬ ರಂದು ಮುಂಜಾನೆ ೩ ಗಂಟೆ ಸಮಯದಲ್ಲಿ ಸ್ಕೂಟರ್ ನಲ್ಲಿ ಖಾಕಿ ಪ್ಯಾಂಟು, ಕಪ್ಪು ಶೂಸ್ ಹಾಗೂ ನೀಲಿ ಜರ್ಕಿನ್, ಹೆಲ್ಮೆಟ್ ಧರಿಸಿದ್ದ ವ್ಯಕಿಯೋರ್ವ ಅಂಗಡಿ ಮುಂದೆ ಇರಿಸಿದ್ದ ಕ್ರೇಟ್ ನಲ್ಲಿ ಹಾಲು ಮತ್ತು ಮೊಸರಿನ ಪ್ಯಾಕೆಟ್ ಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಅಂಗಡಿಯಲ್ಲಿದ್ದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಹರೀಶ್ ಮಾತನಾಡಿ ತಾ. ೩ ರಂದು ಕೂಡ ಬೆಳಗಿನ ಜಾವ ವ್ಯಕ್ತಿಯೋರ್ವ ಸ್ಕೂಟರ್ ನಿಲ್ಲಿಸಿ ಹಾಲಿನ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಹೋಗಿದ್ದು, ಪ್ರತಿದಿನ ಘಟನೆ ಮರುಕಳಿಸುತ್ತಿರುವ ಕಾರಣ ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ಹಾಲಿನ ಪ್ಯಾಕೆಟ್ಗಳನ್ನು ಯಾರೂ ಕದಿಯುವುದಿಲ್ಲ ಎಂಬ ನಂಬಿಕೆಯಲ್ಲಿ ನೆಮ್ಮದಿಯಿಂದಿದ್ದ ಅಂಗಡಿ ಮಾಲೀಕರು ಇತ್ತೀಚೆಗೆ ಹಾಲು ಕಳವು ಆಗುತ್ತಿರುವುದರಿಂದ ಚಿಂತೆಗೊಳಗಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.