ಮಡಿಕೇರಿ, ನ. ೬ : ಎಸ್‌ಕೆಎಫ್‌ಸಿ ಮರಗೋಡು ಇವರ ವತಿಯಿಂದ ಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ತಾ. ೮ ಮತ್ತು ೯ರಂದು ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಮೊಗೇರ ಜನಾಂಗದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು ಒಟ್ಟು ೭ ಮಾಲೀಕತ್ವದ ೭ ತಂಡಗಳು ಪಾಲ್ಗೊಳ್ಳಲಿವೆ. ಮ್ಯಾಡ್ರಿಡ್ ಎಫ್‌ಸಿ ಸುಂಟಿಕೊಪ್ಪ, ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ, ಎಂಎಫ್‌ಸಿ ಅಮ್ಮತಿ, ಅಮೃತ ಮೊಗೇರ ಫ್ರೆಂಡ್ಸ್ ಸಿದ್ದಾಪುರ, ಸೋಕರ್ ಯುನೈಟೆಡ್ ಅಮ್ಮತಿ, ಭಗವತಿ ಹಾಲುಗುಂದ, ಎಸ್‌ಕೆಎಫ್‌ಸಿ ಮರಗೋಡು, ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ಚಾಂಪಿಯನ್ ತಂಡಕ್ಕೆ ರೂ. ೪೪೪೪೪ ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ ರೂ. ೨೨೨೨೨ ನಗದು ಹಾಗೂ ಆಕರ್ಷಕ ಟ್ರೊಫಿ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ಬಹುಮಾನ ನೀಡಲಾಗುವುದು.

ಕ್ರೀಡಾಕೂಟದ ಉದ್ಘಾಟನೆಯನ್ನು ಎಸ್‌ಕೆಎಫ್‌ಸಿ ಫುಟ್ಬಾಲ್ ಆಯೋಜಕರಾದ ಎಂ.ಎಸ್. ವಿಜಯ್ ಇವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಮರಗೋಡು, ನಿಕಟಪೂರ್ವ ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪಿ.ಎಂ. ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರು ಹಾಗೂ ಮೊಗೇರ ಸಮುದಾಯದ ಹಿರಿಯ ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

- ಅಶೋಕ್, ಮಡಿಕೇರಿ