ಕೂಡಿಗೆ, ನ. ೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಸೋಮವಾರಪೇಟೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಚ್ಚುವರಿ ಬೋಧನಾ ತರಬೇತಿ (ಟ್ಯೂಷನ್ ಕ್ಲಾಸ್) ನೀಡುವ ಕಾರ್ಯಾಗಾರ ಮೂಕಾಂಬಿಕಾ ಪ್ರೌಢಶಾಲಾ ಸಭಾಂಗಣದಲ್ಲಿ ಆರಂಭಗೊAಡಿತು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಾಂದ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತ ಮತ್ತು ಅಧ್ಯಯನಶೀಲರಾಗಲು ಹಾಗೂ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅಂಕಗಳನ್ನು ಪಡೆಯಲು ಇಂತಹ ತರಗತಿಗಳ ಮೂಲಕ ಕಲಿಯುವ ವಿಷಯ ಚೇತರಿಕೆ ಮತ್ತು ಚೈತನ್ಯದ ಬೆಳವಣಿಗೆ ಸಹಕಾರಿಯಾಗುವುದು ಎಂದು ತಿಳಿಸಿದರು.

ಕೂಡಿಗೆ ಪದವಿಪೂರ್ವ ಕಾಲೇಜು ಮಾಜಿ ಉಪಾಧ್ಯಕ್ಷ ಕೆ.ಕೆ ನಾಗರಾಜಶೆಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಮಾನದ ಜೊತೆಯಲ್ಲಿ ಪಠ್ಯ ಪುಸ್ತಕದ ವಿಷಯಗಳನ್ನು ಹೆಚ್ಚು ಅರಿತುಕೊಂಡು ಮುಂದಿನ ದಿನಗಳಲ್ಲಿ ಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದುವ ಮೂಲಕ ಮುಂದಿನ ಉನ್ನತ ಶಿಕ್ಷಣಕ್ಕೆ ಸಾಗಲು ಪ್ರೌಢಶಾಲಾ ಶಿಕ್ಷಣ ಹಂತ ಪ್ರಮುಖ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಶ್ ವಹಿಸಿದ್ದರು. ಕುಶಾಲನಗರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೆ.ಟಿ. ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.