ವೀರಾಜಪೇಟೆ, ನ. ೬: ರಾಜ್ಯದ ಸರಕಾರಿ ಶಾಲೆ ಮತ್ತು ಶಾಲಾ ಮಕ್ಕಳನ್ನು ಗುರುತಿಸಿ ಬಡಮಕ್ಕಳ ವಿದ್ಯಾಭ್ಯಾಸ ಮತ್ತು ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನ ರೋಹನ್ ಕೇರ್ ಫೌಂಡೇಶನ್ ತಂಡ ವೀರಾಜಪೇಟೆ ತಾಲೂಕಿನ ಬಾಳುಗೋಡು, ಚಿಟ್ಟಡೆ, ಕುಟ್ಟಂದಿ, ಮತ್ತು ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಾಮಗ್ರಿಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ರೋಹನ್ ಕೇರ್ ಫೌಂಡೇಶನ್‌ನ ಸಂಸ್ಥಾಪಕ ಸದಸ್ಯ ಮಂಜುನಾಥ್ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಭೇಟಿ ಕೊಟ್ಟಿದ್ದೇವೆ, ಈ ಮೊದಲು ಧಾರವಾಡ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ಬಾಗಲಕೋಟೆ, ಕುಷ್ಟಗಿ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಕಲಿಕೋಪಕರಣ ಮತ್ತು ಕೆಲವು ಶಾಲೆಗಳಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿರುತ್ತೇವೆ ಎಂದರು.

ರೋಹನ್ ಕೇರ್ ಫೌಂಡೇಶನ್ ಸದಸ್ಯ ನಾಗರಾಜ್ ರಾವ್ ಮಾತನಾಡಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಬೇಕು, ಶಾಲೆಯ ಮಕ್ಕಳು ಹಾಗೂ ಪೋಷಕರನ್ನು ಸಂಪರ್ಕಿಸಿ ಅವರಿಗೆ ಬೇಕಾಗುವಂತಹ ಸಹಾಯವನ್ನು ನಮ್ಮ ಸಂಸ್ಥೆಯಿAದ ನೀಡುವುದರ ಜೊತೆಗೆ ಸರಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ಪ್ರೋತ್ಸಾಹಿಸುವುದು ಮತ್ತು ದೂರದಿಂದ ಶಾಲೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿAದ ಶಾಲಾ ವಾಹನದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಹನ್ ಕೇರ್ ಫೌಂಡೇಶನ್‌ನ ಸದಸ್ಯರಾದ ಮಹೇಶ್ ಸಿಂದ್ಯಾ, ನಾಗರಾಜ್, ವೆಂಕಟೇಶ್ ಹಾಗೂ ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ, ಸಹ ಶಿಕ್ಷಕಿ ಕಮರುನ್ನಿಸ, ದಾನಿಗಳಾದ ಕೋಡಿರ ಟಿ. ಗಣಪತಿ, ನಿವೃತ್ತ ಸೈನಿಕ ಬಿ.ಎಸ್. ಗೋಪಾಲರಾಜ್ ಮತ್ತಿತರರು ಉಪಸ್ಥಿತರಿದ್ದರು.