ಕೂಡಿಗೆ, ನ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದ ಆವರಣದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ, ಹಾಗೂ ಶ್ರೀ ಅಣ್ಣಪ್ಪ- ಪಂಜುರ್ಲಿ, ಕರ್ಲ್ಲುಟ್ಟಿ ಹಾಗೂ ಚಾಮುಂಡಿ ಗುಳಿಗ ದೈವಗಳ ನರ್ತನ ಸೇವೆಯ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ನಡೆದವು. ದೇವಾಲಯದ ಆವರಣದಲ್ಲಿ ಬೆಳಿಗ್ಗೆ ಗಣಯಾಗ, ದೈವಗಳಿಗೆ ನವಕ, ಪ್ರಧಾನ ಹೋಮ, ಶುದ್ಧಿಕಳಸ ಸೇರಿದಂತೆ ವಿವಿಧ ಪೂಜೆಗಳು ಕೃಷ್ಣ ಭಟ್ ತಂಡದ ವತಿಯಿಂದ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕುಶಾಲನಗರ, ಕೂಡುಮಂಗಳೂರು, ಮದಲಾಪುರ, ಸೀಗೆಹೊಸೂರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮ ನೂರಾರು ಭಕ್ತರು ಭಾಗವಹಿಸಿದರು. ಪೂಜೋತ್ಸವದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ, ಎಸ್ ಆರ್.ಅರುಣ್ ರಾವ್, ಮದಲಾಪುರ ಹಾಗೂ ದೇವಾಲಯದ ಪ್ರಮುಖರು ಹಾಜರಿದ್ದರು.