ವೀರಾಜಪೇಟೆ, ನ. ೯: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ನೆಹರುನಗರ ವಾರ್ಡ್ನ ನೆಹರುನಗರ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಚಾಲನೆ ನೀಡಿದರು.
ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಪ್ರಯತ್ನದಿಂದ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಲಾದ ರೂ. ೨೦ ಕೋಟಿ ಅನುದಾನದಲ್ಲಿ ಪ್ರಾರಂಭಿಸಲಾದ ಮೊದಲ ಕಾಮಗಾರಿ ಇದಾಗಿದ್ದು ಅಧ್ಯಕ್ಷೆ ದೇಚಮ್ಮ ಅವರು ಭೂಮಿ ಪೂಜೆ ನಡೆಸಿದರು.
ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾಹಿತಿ ನೀಡಿ ನೆಹರು ನಗರ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಸಾರ್ವಜನಿಕರು ನಡೆದಾಡಲು ಕೂಡ ಕಷ್ಟಪಡಬೇಕಾಗಿತ್ತಲ್ಲದೇ ಆಟೋ ಚಾಲಕರು ಅಲ್ಲಿಗೆ ಬಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು ಅಲ್ಲದೆ ಹೆಚ್ಚು ಬಾಡಿಗೆ ಬೇಕೆನ್ನುತ್ತಿದ್ದರು.
ಈ ನಿಟ್ಟಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿರುವುದರಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಓಡಾಡಲು ಬದಲಿ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ. ಸ್ಥಳೀಯರು ಕಾಮಗಾರಿ ನಡೆಸುತ್ತಿರುವ ಸಂದರ್ಭ ತಮ್ಮ ಸಹಕಾರ ನೀಡಬೇಕು ಎಂದು ಹೇಳಿದರು.