ಕೂಡಿಗೆ, ನ. ೯ ಕಣಿವೆಯ ಕಾವೇರಿ ನದಿಯ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಕಾವೇರಿ ನದಿಗೆ ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ಆರತಿ, ಪೂಜಾ ಕಾರ್ಯಕ್ರಮವು ವಿಶೇಷ ಪೂಜೆಯೊಂದಿಗೆ ನೆರವೇರಿತು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ನೆರವೇರಿಸಿದರು. ನಂತರ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆಯ ಅಂಗವಾಗಿ ಶ್ರೀ ರಾಮಲಿಂಗೇಶ್ವರ ಸ್ವಾಮಿಗೆ ಪೂಜಾ ಕೈಂಕರ್ಯಗಳು ನಡೆದವು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಸಮಿತಿ ನಿರ್ದೇಶಕರು, ಸದಸ್ಯರು ಹಾಜರಿದ್ದರು.