ಮಡಿಕೇರಿ, ನ. ೯: ಸಾಹಿತ್ಯಕ್ಕೆ ಉತ್ತಮ ಮಾನವನನ್ನಾಗಿ ರೂಪಿಸುವ ಶಕ್ತಿಯಿದೆ ಎಂದು ವೈದ್ಯ, ಸಾಹಿತಿ ಡಾ. ನಡಿಬೈಲು ಉದಯಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಓಂಕಾರ ಸದನದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಆಯೋಜಿತ ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಡಾ. ಉದಯಶಂಕರ್, ಸಾಹಿತ್ಯ ಪ್ರೀತಿಯಿಂದ ಉತ್ತಮ ಗುಣಗಳನ್ನು ಹೊಂದಲು ಸಾಧ್ಯವಿದೆ. ಹೀಗಾಗಿ ಸಾಹಿತ್ಯಾಸಕ್ತಿಯುಳ್ಳವನು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ ಎಂದರು. ಶ್ರೀಮಂತ ಸಂಸ್ಕೃತಿ, ಸಾಹಿತ್ಯವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಪರಿಣಿತಿ ಹೊಂದಿದ ಅನೇಕರು ವಿಶ್ವವ್ಯಾಪಿ ಗಣ್ಯಸ್ಥಾನ ಹೊಂದಿದ್ದಾರೆ.
ಮಕ್ಕಳಿಗೆ ಕರುನಾಡಿನ ಸಾಹಿತ್ಯ, ಸಾಂಸ್ಕೃತಿಕ ಮಹತ್ವವನ್ನು ತಿಳಿಸಲು ಇಂತಹ ವೇದಿಕೆಗಳು ಅಗತ್ಯ ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ. ರಾಘವ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನ ಬಳಕೆ ಮಾಡುವ ಭಾಷೆಯಾಗಿ ಕನ್ನಡಕ್ಕೆ ೨೯ನೇ ಸ್ಥಾನವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ನಾವೆಲ್ಲಾ ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡದ ಸಂರಕ್ಷಣೆಗೆ ಮುಂದಾಗಬೇಕೆAದು ಕರೆ ನೀಡಿದರು. ಇತ್ತೀಚಿನ ಸಿನಿಮಾಗಳಲ್ಲಿ ಕನ್ನಡ ಭಾಷೆಯ ಬಳಕೆ ಸಮರ್ಪಕವಾಗಿ ಆಗದೇ ಕನ್ನಡದ ಕಗ್ಗೊಲೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾಗಿದೆ ಎಂದು ಅವರು ಹೇಳಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಮಾತನಾಡಿ, ೨೦೧೭ ರಲ್ಲಿ ಸ್ಥಾಪಿಸಲ್ಪಟ್ಟ ಸಮರ್ಥ ಕನ್ನಡಿಗರು ಸಂಸ್ಥೆ ರಾಜ್ಯವ್ಯಾಪಿ ನೂರಾರು ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರೀತಿಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ಸಂಚಾಲಕಿ ಕೆ. ಜಯಲಕ್ಷಿö್ಮ ಮಾತನಾಡಿ, ಕಳೆದ ೮ ವರ್ಷಗಳಿಂದ ಕೊಡಗಿನಲ್ಲಿ ೧೪ ಪ್ರಮುಖ ಕಾರ್ಯಕ್ರಮಗಳನ್ನು ಸಂಸ್ಥೆಯಿAದ ಆಯೋಜಿಸಲಾಗಿದೆ ನೂರಾರು ಪ್ರತಿಭೆಗಳಿಗೆ ವೇದಿಕೆ ನೀಡಲಾಗಿದೆ. ಇಂತಹ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮತ್ತಷ್ಟು ಪ್ರೋತ್ಸಾಹ ಅಗತ್ಯ ಎಂದು ಮನವಿ ಮಾಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಸದಸ್ಯೆ ಸವಿತಾ ರಾಕೇಶ್ ಸ್ವಾಗತಿಸಿ, ಪ್ರತಿಮಾ ಹರೀಶ್ ರೈ ನಿರೂಪಿಸಿ, ಶಾಂತಿ ಅಚ್ಚಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ಚಿತ್ರಕಲೆ, ಗೀತೆ, ಸಮೂಹ ನೃತ್ಯ ಮುಂತಾದ ಸ್ಪರ್ಧೆಗಳು ನಡೆದವು.