ಮಡಿಕೇರಿ, ನ. ೧೦: ೨೦೧೫ರಲ್ಲಿ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಘರ್ಷಣೆ ವೇಳೆ ಮೃತಪಟ್ಟ ಇಗ್ಗೋಡ್ಲು ನಿವಾಸಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ದೇವಪಂಡ ಕುಟ್ಟಪ್ಪ ಸ್ಮರಣೆ ಜಿಲ್ಲೆಯ ವಿವಿಧೆಡೆ ನಡೆಯಿತು.
ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರು ಕುಟ್ಟಪ್ಪ ಅವರ ಹೆಸರಿನಲ್ಲಿ ಶಾಂತಿ ಪೂಜೆ ನೆರವೇರಿಸಿ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಮಾತನಾಡಿದ ಕುಕ್ಕೇರ ಅಜಿತ್, ವಿರೋಧದ ನಡುವೆಯೂ ೨೦೧೫ರಲ್ಲಿ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ನಡೆಸಿದ ಪರಿಣಾಮ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಯಿತು. ಇದರಿಂದ ಹಿಂದೂಪರ ಮುಖಂಡ ಕುಟ್ಟಪ್ಪ ಅವರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು. ಕೇರಳ, ಮಂಗಳೂರು, ಮೈಸೂರು ಭಾಗದಿಂದ ಬಂದ ಕಿಡಿಗೇಡಿಗಳು ಬಹುದೊಡ್ಡ ಹಿಂಸಾಚಾರ ನಡೆಸಿದರು. ಹಿಂದೂ ಸಮಾಜ ಜಾಗ್ರತೆ ವಹಿಸಬೇಕು. ಮತಾಂಧ ಶಕ್ತಿಗಳನ್ನು ದೂರವಿಡಬೇಕು. ಕುಟ್ಟಪ್ಪ ಅವರ ಪ್ರಾಣಾರ್ಪಣೆ ವ್ಯರ್ಥವಾಗಬಾರದು. ಹಿಂದೂಗಳು ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.
ಈ ವೇಳೆ ಪ್ರಮುಖರಾದ ಚೇತನ್, ಸುರೇಶ್ ಮುತ್ತಪ್ಪ, ಕುಮಾರ್, ಗುರು, ವಿನೋದ್, ತಿಮ್ಮಯ್ಯ, ಅಪ್ಪು ರೈ, ದುರ್ಗೇಶ್, ಚಂದ್ರ ಉಡೋತ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸೋಮವಾರಪೇಟೆ: ದೇವಪ್ಪಂಡ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ಮಾದಾಪುರದ ಗಣಪತಿ ದೇವಾಲಯ ಆವರಣದಲ್ಲಿ ನಡೆಯಿತು. ಹಿಂದೂಪರ ಸಂಘಟನೆಗಳು ಹಾಗೂ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ತೀವ್ರ ವಿರೋಧದ ನಡುವೆಯೂ ಮಡಿಕೇರಿಯಲ್ಲಿ ಆಯೋಜನೆಗೊಂಡಿದ್ದ ಟಿಪ್ಪು ಜಯಂತಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ, ಗಲಭೆ ಏರ್ಪಟ್ಟು ಮಡಿಕೇರಿ ಆಸ್ಪತ್ರೆಯ ಸಮೀಪ ವಿಹೆಚ್ಪಿ ಪ್ರಧಾನ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಅವರು ಸಾವನ್ನಪ್ಪಿದ್ದರು.
ಇವರ ಸ್ಮರಣಾರ್ಥ ಹಿಂದೂಪರ ಸಂಘಟನೆಗಳು ಪ್ರತಿ ವರ್ಷ ಮಾದಾಪುರದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸುತ್ತಿದ್ದು, ಪ್ರಸಕ್ತ ವರ್ಷ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳ ನೇತೃತ್ವದಲ್ಲಿ, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಶಾಂತಿ ಕೋರಿದರು. ನಂತರ ದೇವಾಲಯ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಟಿಪ್ಪು ಜಯಂತಿ ಸಂದರ್ಭದ ಹೋರಾಟದ ಬಗ್ಗೆ ಮೆಲುಕು ಹಾಕಿದರು. ಕುಟ್ಟಪ್ಪ ಅವರು ಹಿಂದೂ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಗೆ ಹಾಗೂ ತ್ಯಾಗವನ್ನು ಕಾರ್ಯಕರ್ತರು ಸ್ಮರಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಟೋಳಿ ಸದಸ್ಯ ಸುನಿಲ್ ಮಾದಾಪುರ, ತಾಲೂಕು ಸಹ ಸಂಯೋಜಕ್ ಸೂರಜ್, ಪ್ರಮುಖರಾದ ಕೊಪ್ಪತಂಡ ಗಣೇಶ್, ಕೆ. ನಂದ ಮಾದಪ್ಪ, ಬೆಲ್ಲು, ಅಶೋಕ್, ದೇವಪ್ಪ, ಪಳಂಗಪ್ಪ, ಮನೋಜ್ಕುಮಾರ್, ಬಿಪಿನ್, ವಿನಯ್, ರಾಜೇಶ್, ಪ್ರಸಾದ್, ಅಜಿತ್, ರಮೇಶ್, ಗಗನ್, ಪ್ರದೀಪ್, ದೇವಯ್ಯ, ರಮೇಶ್ ಸೇರಿದಂತೆ ಇತರರು ಇದ್ದರು.