ನವದೆಹಲಿ, ನ. ೧೦: ದೇಶಾದ್ಯಂತ ಇಂದು ೨,೯೦೦ ಕೆಜಿ ಸ್ಫೋಟಕಗಳ ಪತ್ತೆ ಬೆನ್ನಲ್ಲೇ ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಹಲವು ದೇಹಗಳು ಛಿದ್ರ ಛಿದ್ರವಾಗಿವೆ.

೯ ಮಂದಿ ಮೃತಪಟ್ಟಿ ರುವುದಾಗಿ ವರದಿಯಾಗಿದೆ. ಸ್ಫೋಟದ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ೨೫ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಜೆ ೬.೫೫ರ ಸುಮಾರಿಗೆ ಸ್ಫೋಟ ಸಂಭವಿಸಿದೆ.ದೆಹಲಿ ಕೆಂಪುಕೋಟೆಯ ಚಾಂದನಿ ಚೌಕ್‌ನ ಲಾಲ್ ಕಿಲಾ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕಾರಣ ಏನೆಂದು ಪತ್ತೆಯಾಗಿಲ್ಲ. ಸದ್ಯ ೭ ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದವು.

ಘಟನೆಯ ಸಮಯದಲ್ಲಿ ದೊಡ್ಡ ಜನಸಮೂಹವೇ ನೆರೆದಿತ್ತು. ಕೆಂಪುಕೋಟೆ ಪ್ರದೇಶವು ಸಂಜೆಯ ಸಮಯದಲ್ಲಿ ಜನದಟ್ಟಣೆಯಿಂದ ಕೂಡಿರುತ್ತದೆ. ಜನರು ದೃಶ್ಯವೀಕ್ಷಣೆಗೆ ಭೇಟಿ ನೀಡುತ್ತಾರೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ ೧ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಮೂರರಿಂದ ೬ ಕಾರು, ೩ ಆಟೋ ಸೇರಿ ಹಲವು ವಾಹನಗಳು ಬೆಂಕಿಯಿAದ ಹೊತ್ತಿ ಉರಿದಿವೆ. ಘಟನೆ ನಂತರ ದೆಹಲಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿವೆ.