ಮಡಿಕೇರಿ, ನ. ೧೦: ಕಳೆದ ೨೫ ವರ್ಷಗಳಿಂದ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದಂತ ಸ್ಥಿತಿಯಲ್ಲಿರುವ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ದುರಸ್ತಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ರೂ. ೩.೫೦ ಕೋಟಿ ಹಣ ಬಿಡುಗಡೆಗೊಳಿಸಿದ್ದು, ತಾ. ೧೪ ರಂದು ಭೂಮಿಪೂಜೆ ನೆರವೇರಲಿದೆ ಎಂದು ವಲಯ ಕಾಂಗ್ರೆಸ್ ಪ್ರಮುಖರು ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಸುಭಾಷ್ ಆಳ್ವ, ಅಭಿವೃದ್ಧಿ ಕಾಣದೆ ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗಾಳಿಬೀಡು-ಕಡಮಕಲ್ಲು ರಸ್ತೆಯ ಅಭಿವೃದ್ಧಿಗೆ ಶಾಸಕ ಮಂತರ್ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಅವರ ಪ್ರಯತ್ನದಿಂದ ೩.೫ ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಮಂತರ್ ಅವರು ಶಾಸಕರಾಗಿ ಚುನಾಯಿತರಾದ ಸಂದರ್ಭವೇ ರೂ. ೨ ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ರಸ್ತೆ ಸಮಸ್ಯೆಯನ್ನು ಅರಿತು ಹೆಚ್ಚುವರಿಯಾಗಿ ಅನುದಾನ ಒದಗಿಸಿದ್ದಾರೆ. ತಾ. ೧೪ ರಂದು ಬೆಳಿಗ್ಗೆ ೯.೩೦ಕ್ಕೆ ಗಾಳಿಬೀಡು ಗ್ರಾಮದ ಕೋಳಿಗೂಡು ಎಂಬಲ್ಲಿ ಭೂಮಿಪೂಜೆಯನ್ನು ಶಾಸಕರು ನೆರವೇರಿಸಲಿದ್ದಾರೆ ಎಂದು ಹೇಳಿದರು.
ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಮಾತನಾಡಿ, ಹಿಂದಿನ ಜನಪ್ರತಿನಿಧಿಗಳು ಮಾಡಲಾಗದ ಕೆಲಸವನ್ನು ಹಾಲಿ ಶಾಸಕರು ಮಾಡಿ ತೋರಿಸಿದ್ದಾರೆ. ಇದರಿಂದ ಜನರಿಗೆ ಉಪಯೋಗವಾಗಲಿದೆ. ಈ ರಸ್ತೆಯಲ್ಲಿ ಹಲವಷ್ಟು ರೆಸಾರ್ಟ್ಗಳಿದ್ದು, ಭಾರಿ ವಾಹನಗಳು ಓಡಾಡುತ್ತವೆ. ಸ್ಥಳೀಯ ಗ್ರಾ.ಪಂ. ರಸ್ತೆ ಕಾಮಗಾರಿ ಮುಗಿಯುವ ತನಕ ಭಾರಿ ವಾಹನಗಳ ಓಡಾಟಕ್ಕೆ ಪರ್ಯಾಯ ಕ್ರಮಕೈಗೊಂಡು ರಸ್ತೆ ದೀರ್ಘಕಾಲ ಸುಸ್ಥಿತಿಯಲ್ಲಿಡುವತ್ತ ಚಿಂತನೆ ಹರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಐಲಪಂಡ ಪುಷ್ಪ ಪೂಣಚ್ಚ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹರಿಪ್ರಸಾದ್ ಕೋಚನ, ವಲಯ ಕಾಂಗ್ರೆಸ್ ಸದಸ್ಯರುಗಳಾದ ಮದನ್ ಕೊಂಬಾರನ, ಗಣಪತಿ ಹಾಜರಿದ್ದರು.