ಚೆಟ್ಟಳ್ಳಿ, ನ. ೧೦: ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ ಸಹಯೋಗದೊಂದಿಗೆ ಕುಶಾಲನಗರ ತಾಲೂಕಿನ ಹೇರೂರು ಗ್ರಾಮದಲ್ಲಿ ಬ್ಯಾಂಕ್‌ನ ಯೋಜನೆ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್ಥಿಕ ಸಮಲೋಚಕ ನಬಿ, ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ ೨೦ ರೂಪಾಯಿಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ರೂ. ೨,೦೦,೦೦೦ ಗಳವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು.

ಆರ್ಥಿಕ ಸಮಾಲೋಚಕ ಹರೀಶ್ ಸಿ.ಜಿ. ಮಾತನಾಡಿ, ಪ್ರತಿಯೊಬ್ಬರು ರೀ ಕೆವೈಸಿ ಕಡ್ಡಾಯವಾಗಿ ಮಾಡಿಸುವಂತೆ ತಿಳಿಸಿದರು. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ ಆಧಾರ್ ಕಾರ್ಡನ್ನು ನೀಡಿ ಮರು ಕೆವೈಸಿ ಮಾಡಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಬಾರ್ಡ್ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು ಇದರ ಮುಖ್ಯ ಉದ್ದೇಶವು ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್‌ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ಸುಪರ್ಣ ಮಾತನಾಡಿ, ಈ ಒಂದು ಕಾರ್ಯಕ್ರಮವು ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಅಂಗನವಾಡಿ ಶಿಕ್ಷಕಿ ಧನಲಕ್ಷಿ ಹರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.