ಸೋಮವಾರಪೇಟೆ, ನ. ೧೧: ರೈತರ ಜಮೀನುಗಳ ಪೋಡಿ ದುರಸ್ತಿಗೆ ಆಗ್ರಹಿಸಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೂ ನಡೆದ ರೈತರ ಅನಿರ್ದಿಷ್ಟಾವಧಿ ಮುಷ್ಕರ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ ನಂತರ ತಾತ್ಕಾಲಿಕವಾಗಿ ಅಂತ್ಯಗೊAಡಿದೆ.
ನಿನ್ನೆ ಬೆಳಗ್ಗಿನಿಂದಲೇ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಭೇಟಿ ನಂತರವೂ ಪ್ರತಿಭಟನೆ ಮುಂದುವರೆಸಿದ್ದರು. ಸಂಜೆ ವೇಳೆಗೆ ಆಗಮಿಸಿದ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ರೈತರ ಸಮಸ್ಯೆಗಳನ್ನು ಕೇಳಿಸಿಕೊಂಡರೇ ಹೊರತು, ತಕ್ಷಣದ ಕ್ರಮ ಕೈಗೊಳ್ಳುವ ಭರವಸೆ ನೀಡಲಿಲ್ಲ. ಈ ಹಿನ್ನೆಲೆ ಅಸಮಾಧಾನಗೊಂಡ ರೈತರು ಮತ್ತೆ ಪ್ರತಿಭಟನೆ ಮುಂದುವರೆಸಿದರು.
ರಾತ್ರಿಯಿಡೀ ತಾಲೂಕು ಕಚೇರಿಯ ಮುಂಭಾಗವೇ ಕಳೆದು ಇಂದು ಬೆಳಗ್ಗಿನಿಂದಲೂ ಪ್ರತಿಭಟನೆಯಲ್ಲಿ ಭಾಗಿಯಾದರು. ನಂತರ ಕುಶಾಲನಗರಕ್ಕೆ ಕಂದಾಯ ಇಲಾಖಾ ಸಚಿವರು ಆಗಮಿಸಿದ ಹಿನ್ನೆಲೆ, ಅಲ್ಲಿಗೆ ತೆರಳಿ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಪೋಡಿ ದುರಸ್ತಿ ಆಗದೇ ಇರುವುದರಿಂದ ರೈತರು ತೀವ್ರ ಸಮಸ್ಯೆಗೆ ಸಿಲುಕಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಿದರು. ನಂತರ ಸೋಮವಾರಪೇಟೆ ತಾಲೂಕು ಕಚೇರಿಯ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಸಚಿವರ ಭೇಟಿ ಸಂದರ್ಭ ರೈತ ಮುಖಂಡರಾದ ಬಗ್ಗನ ಅನಿಲ್ಕುಮಾರ್, ಡಾಲಿ ಪ್ರಕಾಶ್, ಹಿರಿಕರ ರಮೇಶ್, ಮೊಗಪ್ಪ, ಎಸ್.ಎಂ. ಡಿಸಿಲ್ವಾ, ಹೂವಯ್ಯ ಮಾಸ್ಟರ್, ಚಕ್ರವರ್ತಿ ಸುರೇಶ್, ಶ್ರೀನಿಧಿ ಲಿಂಗಪ್ಪ, ಆದರ್ಶ್ ಯಡವನಾಡು, ರಾಜೇಶ್ ಕೊತ್ನಳ್ಳಿ, ಬಗ್ಗನ ಹರೀಶ್, ವಿನಯ್ ಸಂಭ್ರಮ್, ಕೊಡ್ಲಿಪೇಟೆ ಶರತ್ಚಂದ್ರ, ಫ್ರಾನ್ಸಿಸ್ ಡಿಸೋಜ ಸೇರಿದಂತೆ ಇತರರು ಇದ್ದರು.