ಸಿದ್ದಾಪುರ, ನ. ೧೧: ಸೋಮವಾರದಂದು ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ತೋಟದಲ್ಲಿ ಹಾಡಹಗಲೇ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಫಿ ತೋಟದೊಳಗೆ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಗುಂಪುವಿನ ಪೈಕಿ ಒಂದು ಗುಂಪಿನಲ್ಲಿದ್ದ ೯ ಕಾಡಾನೆಗಳು ಕಂಡುಬAದವು. ಈ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿತು. ಆದರೂ ಛಲ ಬಿಡದ ಕಾರ್ಯಾಚರಣೆ ತಂಡ ಕಾಡಾನೆಗಳನ್ನು ದೇವಮಚ್ಚಿ ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಿದರು.
ಕಾಡಿಗೆ ತೆರಳಿದ ಕಾಡಾನೆಗಳು ರಾತ್ರಿ ಸಮಯದಲ್ಲಿ ಮತ್ತೆ ಹಿಂತಿರುಗಿ ನಾಡಿನತ್ತ ಲಗ್ಗೆ ಇಡುತ್ತಿದ್ದು ಕಾರ್ಯಾಚರಣೆ ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ರಾತ್ರಿ ಕೂಡ ಕಾಡಾನೆಗಳ ಚಲನವಲನ ಕಂಡು ಹಿಡಿಯಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಎ.ಸಿ.ಎಫ್. ಗೋಪಾಲ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ಉಪವಲಯ ಅರಣ್ಯ ಅಧಿಕಾರಿ ಶಶಿ.ದೇವರಾಜ್ ವೀರಾಜಪೇಟೆ ಮತ್ತು ತಿತಿಮತಿ ವಲಯ ಅರಣ್ಯ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡದ ಆನೆ ಕಾರ್ಯಪಡೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.