ಮಡಿಕೇರಿ, ನ. ೧೪ : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ಅ. ೨೬ರಂದು ಚುನಾವಣೆ ನಡೆದಿದ್ದು, ಫಲಿತಾಂಶವನ್ನು ನ್ಯಾಯಾಲಯದ ನಿರ್ದೇಶನದಂತೆ ಪ್ರಕಟಿಸಿರಲಿಲ್ಲ. ಸಂಘದ ಕೆಲ ಸದಸ್ಯರು ತಮಗೆ ಮತ ಚಲಾವಣೆಯ ಅವಕಾಶ ಸಿಗದಿದ್ದ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಈ ಸದಸ್ಯರಿಗೆ ಪ್ರತ್ಯೇಕವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

ಈ ವಿವಾದದ ಕಾರಣದಿಂದ ಚುನಾವಣೆ ನಂತರ ಮತ ಎಣಿಕೆ ನಡೆಸಲು ತಡೆ ನೀಡಲಾಗಿತ್ತು. ಬಳಿಕ ಮತ ಪೆಟ್ಟಿಗೆಗಳನ್ನು ಪ್ರತ್ಯೇಕವಾಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿತ್ತು. ಇದೀಗ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅರ್ಹ ಮತದಾರರು ಮಾಡಿರುವ ಮತಗಳನ್ನು ಮಾತ್ರ ಎಣಿಕೆ ಮಾಡಿ ಫಲಿತಾಂಶ ಘೋಷಿಸಲು ನ್ಯಾಯಾಲಯದ ಮೂಲಕ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಅವಕಾಶ ಪಡೆದು ಮತ ಚಲಾಯಿಸಿದ್ದ ಮತಗಳನ್ನು ಹೊರತುಪಡಿಸಿ ಈ ಹಿಂದೆ ಅರ್ಹ ಮತದಾರರಾಗಿ ಪಟ್ಟಿಯಲ್ಲಿದ್ದ ಮತದಾರರು ಚಲಾಯಿಸಿದ್ದ ಮತ ಎಣಿಕೆಯನ್ನು ತಾ. ೧೮ರಂದು ನಡೆಸಲಾಗುತ್ತಿದೆ.

ತಾ. ೧೮ರಂದು ಅಪರಾಹ್ನ ೧೨ ಗಂಟೆಗೆ ಮಡಿಕೇರಿಯ ಬಾಲಭವನದ ಕಟ್ಟಡದಲ್ಲಿ ಮತ ಎಣಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.