ಮಡಿಕೇರಿ ನ.೧೪ : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು, ವಿರೋಧ ಪಕ್ಷಗಳ ಆಧಾರ ರಹಿತ ಟೀಕೆಗಳಿಗೆ ಪ್ರತ್ಯುತ್ತರ ನೀಡುವುದು ಮತ್ತು ಮತ ಕಳ್ಳತನ ವಿರುದ್ಧ ಅಭಿಯಾನ ನಡೆಸಲು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ನಿರ್ಧರಿಸಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಜಿಲ್ಲೆಯ ಇಬ್ಬರು ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ೬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳ ಸಹಕಾರ ಪಡೆದು ಕಾರ್ಯೋನ್ಮುಖವಾಗಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ಮಾನಿಸಿತು. ಆಯಾ ಬ್ಲಾಕ್‌ನ ನೂತನ ಅಧ್ಯಕ್ಷರುಗಳು ಎಲ್ಲಾ ಕಾಂಗ್ರೆಸ್ ನಾಯಕರುಗಳ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಈ ತಿಂಗಳ ಅಂತ್ಯದೊಳಗೆ ಅರ್ಥಪೂರ್ಣವಾಗಿ ಅಧಿಕಾರ ಸ್ವೀಕರಿಸಬೇಕು. ಪ್ರತಿ ವಲಯ ಹಾಗೂ ನಗರ ಪ್ರದೇಶದಲ್ಲಿ ೬ ಮಂದಿ ಪದಾಧಿಕಾರಿಗಳಾದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸಂಯೋಜಕ ಹಾಗೂ ಉಪ ಸಂಯೋಜಕರನ್ನು ನೇಮಿಸಿ ಸಮಿತಿ ರಚಿಸಬೇಕು. ಪ್ರತಿ ಬೂತ್ ಗೆ ಸಾಮಾಜಿಕ ಜಾಲತಾಣವನ್ನು ಅಸ್ತಿತ್ವಕ್ಕೆ ತಂದು ಕಾರ್ಯನಿರ್ವಹಿಸಲು ಇಬ್ಬರನ್ನು ನೇಮಿಸಬೇಕು. ಮುಂದಿನ ಡಿಸೆಂಬರ್ ಅಂತ್ಯದೊಳಗೆ ಜಿಲ್ಲಾ ಪ್ರಚಾರ ಸಮಿತಿ ಮತ್ತು ೬ ಬ್ಲಾಕ್ ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಶಿಬಿರವನ್ನು ನಡೆಸಲು ಸಭೆ ನಿರ್ಧರಿಸಿತು.
ಟಿ.ಪಿ.ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷ ಸಂಘಟನೆಗೆ ಕರೆ ನೀಡಿದರು. ಜಿಲ್ಲಾ ಉಪಾಧ್ಯಕ್ಷರುಗಳಾದ ಬಾಚುಮಂಡ ಲವ ಚಿಣ್ಣಪ್ಪ, ಮೋಹನ್ ಮೌರ್ಯ, ಕೋಶಾಧಿಕಾರಿ ಹ್ಯಾರಿಸ್ ಕೊಳಕೇರಿ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಮಡಿಕೇರಿಯ ವಿ.ಜಿ. ಮೋಹನ್, ಕುಶಾಲನಗರದ ಎ.ಕೆ.ಹಕೀಂ, ಸೋಮವಾರಪೇಟೆಯ ವಿ.ಎ.ಲಾರೆನ್ಸ್, ನಾಪೋಕ್ಲುವಿನ ಪೆರುಮುಂಡ ಮನು, ಸಂಯೋಜಕÀ ಮತ್ರಂಡ ದಿಲ್ಲು ಹಾಗೂ ಸಹ ಸಂಯೋಜಕರಾದ ರೇವತಿ ರಮೇಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಿತಿ ಸದಸ್ಯರುಗಳಾದ ಶಬರೀಶ್ ಶೆಟ್ಟಿ, ರಾಫೀಕ್, ಪಿ.ಜಿ.ರಾಜಶೇಖರ್, ಸದಾನಂದ ಬಂಗೇರ, ಜುಲೆಕಾಬಿ, ಬಾಲಚಂದ್ರ ನಾಯರ್, ಔರಂಗಜೇಬ್ ಹಾಗೂ ದೇವಿ ಪ್ರಸಾದ್ ಅವರುಗಳು ಸಭೆಯಲ್ಲಿ ಸಲಹೆಗಳನ್ನು ನೀಡಿದರು. ಮೋಹನ್ ಮೌರ್ಯ ಸ್ವಾಗತಿಸಿ, ನಿರೂಪಿಸಿದರು, ಹ್ಯಾರಿಸ್ ಕೊಳಕೇರಿ ವಂದಿಸಿದರು.