ಮಡಿಕೇರಿ, ನ. ೧೫ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಕಡಮಕಲ್ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮದ ಕುರಿತ ವರದಿಯನ್ನು ವಾರದ ಒಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಚೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕಡಮಕಲ್ ನಿವಾಸಿಗಳೊಂದಿಗೆ ಕುಂದುಕೊರತೆ ಸಭೆ ನಡೆಸಿ ಜನರಿಂದ ಮಾಹಿತಿ ಪಡೆದ ಶಾಸಕರು ಮನೆ ಮತ್ತು ಜಮೀನಿನ ದಾಖಲೆಗಳು, ಕುಡಿಯುವ ನೀರು ಸರಬರಾಜು, ಟ್ಯಾಂಕ್ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಉನ್ನತೀಕರಣ, ರಸ್ತೆ ನಿರ್ಮಾಣ, ಅರಣ್ಯ ಇಲಾಖೆ ಮತ್ತು ಗ್ರಾಮದ ಗಡಿ ಗೊಂದಲಗಳ ನಿವಾರಣೆ ಹಾಗೂ ಪಡಿತರ ವಿತರಣೆಯ ಬಗ್ಗೆ ಚರ್ಚೆ ಮಾಡಿ ನಿಯಮಾನುಸಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರು ಅಧಿಕಾರಿಗಳೊಂದಿಗೆ ಬಂದು ಕುಂದುಕೊರತೆ ನಿವಾರಣೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ೨೦೦ರಷ್ಟು ಜನಸಂಖ್ಯೆ ಇರುವ ಕಡಮಕಲ್ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರೆ ಇದ್ದು ಸುಳ್ಯ ಮೂಲಕ ೮೦ ಕಿ.ಮೀ ಕ್ರಮಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಬಂದು ಕೆಲಸ ಮಾಡಿಕೊಂಡು ಹೋಗುವುದು ಅಸಾಧ್ಯವಾಗಿರುವುದರಿಂದ ಇಲ್ಲಿ ಯಾವುದೇ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿಲ್ಲ. ಸರ್ಕಾರದ ಸೌಲಭ್ಯ ಪಡೆಯುವುದು ೬ನೇ ಪುಟಕ್ಕೆ (ಮೊದಲ ಪುಟದಿಂದ) ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು ಅದನ್ನು ಒಬ್ಬ ಜನಪ್ರತಿನಿಧಿಯಾಗಿ ಒದಗಿಸಲು ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯ ಅಧ್ಯಕ್ಷ ಸುಭಾಷ್ ಆಳ್ವ, ಪ್ರಮುಖರಾದ ಪುಷ್ಪ ಪೂಣಚ್ಚ, ವಿ.ಜಿ. ಮೋಹನ್, ಕೋಚನ ಹರಿಪ್ರಸಾದ್, ಹಂಚೆಟ್ಟಿರ ಮನು ಮುದ್ದಪ್ಪ, ಅಪ್ರು ರವೀಂದ್ರ, ಕಿರಣ್, ರೋಷನ್ ಗಣಪತಿ, ಪ್ರಭುರೈ, ರವಿಗೌಡ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.