ಸೋಮವಾರಪೇಟೆ, ನ. ೧೫: ರಾಷ್ಟç ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಪೋಟಿಸಿ ಅಮಾಯಕರ ಸಾವಿಗೆ ಕಾರಣರಾದ ಭಯೋತ್ಪಾದಕರ ನಡೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಭಯೋತ್ಪಾದನಾ ಕೃತ್ಯ, ಇದನ್ನು ಖಂಡಿಸದ ರಾಜಕಾರಣಿಗಳು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ದೇಶದೊಳಗಿನ ಇಂತಹ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದರೊಂದಿಗೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ಬೋಜೇಗೌಡ ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಹೇಳುವವರು ದೇಶದಲ್ಲಿ ನಡೆಯುವ ಎಲ್ಲಾ ಭಯೋತ್ಪಾದಕ ಕೃತ್ಯಗಳ ಹಿಂದೆ ಯಾರಿದ್ದಾರೆ ಎಂಬುದನ್ನೂ ಮೊದಲು ಮನಗಾಣಲಿ ಎಂದರು.

ಭಯೋತ್ಪಾದಕ ಕೃತ್ಯಗಳು ನಡೆದಾಗ ಅದನ್ನು ಸಂಭ್ರಮಿಸುವರೂ ದೇಶದೊಳಗಿದ್ದಾರೆ. ಇವರುಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇಲಾಖೆಯೊಂದಿಗೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ.

ಹಿಂದೂಗಳನ್ನು ಹತ್ಯೆ ಮಾಡಲು ಸಂಚು ನಡೆಸುವುದು ಆಗಿಂದಾಗ್ಗೆ ಬಯಲಾಗುತ್ತಲೇ ಇದೆ. ಹಿಂದೂ ಸಮಾಜ ಇದರ ಬಗ್ಗೆ ಗಂಭೀರವಾಗಿ ಎಚ್ಚರ ವಹಿಸಬೇಕಿದೆ ಎಂದು ಬೋಜೇಗೌಡ ತಿಳಿಸಿದರು. ಗಡಿಯಲ್ಲಿ ಭಯೋತ್ಪಾದಕರನ್ನು ತಡೆಗಟ್ಟಲು ಸೈನ್ಯವಿದೆ. ಆದರೆ ದೇಶದ ಒಳಗೆ ಇರುವ ಆಂತರಿಕ ಭಯೋತ್ಪಾದಕರ ಬಗ್ಗೆ ಪ್ರಜ್ಞಾವಂತ ನಾಗರಿಕರೇ ಜಾಗೃತಗೊಳ್ಳಬೇಕು. ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದರು.

ದೆಹಲಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕದ ಸುಭಾಷ್ ತಿಮ್ಮಯ್ಯ, ತಾಲೂಕು ಸಂಯೋಜಕ್ ಎಂ.ಬಿ. ಉಮೇಶ್, ಪ್ರಚಾರ ಪ್ರಮುಖ್ ಹೇಮಂತ್ ಪೂಜಾರಿ, ವಿನು ಮಾದಾಪುರ, ದೀಪಕ್, ರತನ್ ಮಳ್ತೆ, ನಿಲಯ್ ಗೌಡ, ದಿಲೀಪ್, ಪ್ರಮುಖರಾದ ಬಿ.ಜೆ.ದೀಪಕ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ಎಸ್.ಆರ್. ಸೋಮೇಶ್, ದರ್ಶನ್ ಜೋಯಪ್ಪ, ಕಿಬ್ಬೆಟ್ಟ ಮಧು, ಮೋಕ್ಷಿಕ್ ರಾಜ್, ಶರತ್‌ಚಂದ್ರ, ಶ್ರೀನಿಧಿ ಲಿಂಗಪ್ಪ, ಮಸಗೋಡು ಸುರೇಶ್, ಮೋಹನ್, ಹರೀಶ್, ಆದರ್ಶ್, ನತೀಶ್, ಶುಂಠಿ ಸುರೇಶ್ ಸೇರಿದಂತೆ ಇತರರು ಇದ್ದರು.