ಪೊನ್ನಂಪೇಟೆ, ನ. ೧೫: ಹೆಣ್ಣು ಮಕ್ಕಳ ಮನದಲ್ಲಿ ಧೈರ್ಯ ತುಂಬಲು ಪ್ರೇರಣದಾಯಿಯಾದ ರಾಣಿ ಅಬ್ಬಕ್ಕ ಅವರ ಸಾಹಸ ಕಥೆಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯ ಇದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಎಸ್. ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ಕಾಲೇಜು ಸೆಮಿನಾರ್ ಹಾಲ್ನಲ್ಲಿ, ಕರ್ನಾಟಕ ರಾಜ್ಯ ಮಹಾ ವಿದ್ಯಾಲಯದ ಮಂಗಳೂರು ವಿಭಾಗ ಶಿಕ್ಷಕರ ಸಂಘ, ಗೋಣಿಕೊಪ್ಪ ಕಾವೇರಿ ಕಾಲೇಜು ಕನ್ನಡ ವಿಭಾಗ ಹಾಗೂ ಕಾವೇರಿ ಕಾಲೇಜು ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಣಿ ಅಬ್ಬಕ್ಕ ಅವರ ೫೦೦ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ, ರಾಣಿ ಅಬ್ಬಕ್ಕ ಅವರ ಉಪನ್ಯಾಸಗಳ ಸರಣಿ ಎಸಳಿನ ೮೭ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷರಿಗಿಂತ ಮಹಿಳೆಯರು ಶಕ್ತರು. ಮಹಿಳೆಯರು ಮಾಡುವ ಬಹುತೇಕ ಕೆಲಸಗಳನ್ನು ಪುರುಷರಿಂದ ನಿಭಾಯಿಸಲು ಸಾಧ್ಯವಿಲ್ಲ. ಅಂತಹ, ಮಹಾನ್ ವ್ಯಕ್ತಿತ್ವ ಮಹಿಳೆಯರಿಗೆ ಇದೆ. ಇಂತಹ ಮೇರು ಗುಣಗಳಿರುವುದರಿಂದಲೇ ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಈ ನೆಲದಿಂದ ಓಡಿಸಲು ಸತತ ಹೋರಾಟವನ್ನು ನಡೆಸಿದ್ದಾರೆ.
ಉಲ್ಲಾಳದ ರಾಣಿಯಾಗಿ ಮೆರೆಯಬೇಕಾದ ಅಬ್ಬಕ್ಕ ದೇಶವನ್ನು ವಶಪಡಿಸಿಕೊಂಡ ಪೋರ್ಚುಗೀಸರ ವಿರುದ್ಧ ಹೋರಾಟದ ಹಾದಿಯಲ್ಲಿಯೇ ತಮ್ಮ ಜೀವನವನ್ನು ಸವೆಸಿದ್ದಾರೆ. ಈ ದೇಶದ ನೆಲ, ಜಲ, ಪ್ರಕೃತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ತ್ಯಾಗಿ ಅಬ್ಬಕ್ಕ.ಅವರ ವೀರತ್ವದ ಕಥೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿರಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ಕೆನರಾ ಇಂಜಿನಿಯರಿAಗ್ ಕಾಲೇಜು ಡೀನ್ ಪ್ರೊ. ಉದಯ ಕುಮಾರ್ ಶೆಣೈ ಮಾತನಾಡಿ, ೧೪-೧೫ನೇ ಶತಮಾನದಲ್ಲಿ ಕಾಣಿಸಿಕೊಳ್ಳುವ ರಾಣಿ ಅಬ್ಬಕ್ಕ, ಭಾರತದ ಸಂಪತ್ತುಗಳಾದ ಸಂಬಾರ ಪದಾರ್ಥಗಳನ್ನು ಕದ್ದೊಯ್ಯಲು ಕಡಲುಗಳ್ಳರಾಗಿ ಬಂದ ಪೋರ್ಚುಗೀಸರ ವಿರುದ್ಧ ಧ್ವನಿ ಎತ್ತಿ ಹೋರಾಡಿದ ವೀರ ವನಿತೆ. ಅವಳ ಹೋರಾಟದ ಕಿಚ್ಚು ನಂತರದ ಸ್ವಾತಂತ್ರö್ಯ ಹೋರಾಟಕ್ಕೆ ಅಡಿಗಲ್ಲಾಯಿತು ಎಂದೇ ಹೇಳಬಹುದು.
ಸಂಗೀತ, ಸಂಸ್ಕೃತಿ, ಸಾಹಿತ್ಯ, ರಾಜತಾಂತ್ರಿಕ ಶಿಕ್ಷಣಗಳನ್ನು ಒಳಗೊಂಡು ಮಹಿಳೆಯಾಗಿ ತನ್ನ ರಾಜ್ಯವನ್ನು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೋರ್ಚುಗೀಸರ ವಿರುದ್ಧ ನಿಂತು ಯುದ್ಧಗಳನ್ನು ಮಾಡುವ ಮೂಲಕ ಪೋರ್ಚುಗೀಸರ ವಿರುದ್ಧ ಸಮರ ಸಾರಿದ ವನಿತೆ ಸಣ್ಣ ದೋಣಿಗಳ ಮೂಲಕವೇ ಪೋರ್ಚುಗೀಸರ ಬೃಹತ್ ಗಾತ್ರದ ಹಡಗುಗಳನ್ನು ಹೊಡೆದುರುಳಿಸಿದ ಚಾಣಕ್ಯೆ ರಾಣಿ ಅಬ್ಬಕ್ಕ ಎಂದು ಅವರ ಜೀವನ ಆಧಾರಿತ ಕಥೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ ಚಂದ್ರನ್ ಮಾತನಾಡಿ, ನಮ್ಮ ದೇಶದ ಇತಿಹಾಸಗಳ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಕರ್ತವ್ಯವೂ ಆಗಿದೆ. ನಾವು ಜೀವನದ ಬಗ್ಗೆ ಸ್ಪಷ್ಟ ಉತ್ತರವನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಬದುಕಿನ ಶ್ರೇಷ್ಠತೆಗಾಗಿ ಮತ್ತು ಈ ದೇಶದ ಋಣಕ್ಕಾಗಿ ನಾವು ಇತಿಹಾಸವನ್ನು ತಿಳಿದುಕೊಂಡು ಆ ಮಾದರಿಯಲ್ಲಿ ನಡೆಯುವ ಮೂಲಕ ದೇಶಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗದ ಜಂಟಿ ಕಾರ್ಯದರ್ಶಿ ಡಾ. ಮಾಧವ. ಎಂ.ಕೆ. ಪ್ರಾಸ್ತಾವಿಕ ಮಾತನಾಡಿ, ನಮ್ಮ ದೇಶ ಹಾಗೂ ನಮ್ಮ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡಿದ ಚೇತನಗಳ ಬಗ್ಗೆ ಯುವ ಪೀಳಿಗೆ ತಿಳಿಸುವ ಪ್ರಯತ್ನದ ಭಾಗವಾಗಿ ರಾಣಿ ಅಬ್ಬಕ್ಕ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಮಾತನಾಡಿ, ರಾಣಿ ಅಬ್ಬಕ್ಕನಂತಹ ದೇಶಭಕ್ತರನ್ನು ಸ್ಫೂರ್ತಿಯಾಗಿಸಿಕೊಂಡು, ನಾವು ದೇಶಕ್ಕಾಗಿ ಬದುಕುವುದನ್ನು ಕಲಿಯಬೇಕಿದೆ. ನಮ್ಮ ನಮ್ಮಲ್ಲೇ ಎತ್ತಿಕಟ್ಟಿ ದೇಶವನ್ನು ಒಡೆದು ಆಳುವವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ ಅಂತಹವರ ಬಗ್ಗೆ ಜಾಗೃತರಾಗಿ ನಾವೆಲ್ಲರೂ ಒಗ್ಗಟ್ಟಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಆರ್. ಶೆಟ್ಟಿ ಇದ್ದರು. ಕಾರ್ಯಕ್ರಮ ಸಂಯೋಜಕಿ ಡಾ. ರೇವತಿ ಸಿ.ಎಂ ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕ ಪ್ರೊ. ಆರ್. ತಿಪ್ಪೇಸ್ವಾಮಿ ವಂದಿಸಿದರು. ಉಪನ್ಯಾಸಕ ಸಂತೋಷ್ ಹೆಚ್.ಎಸ್. ಕಾರ್ಯಕ್ರಮ ನಿರೂಪಿಸಿದರು.