ವೀರಾಜಪೇಟೆ, ನ. ೧೫: ಕಾಕೋಟುಪರಂಬು ಕೈಲ್‌ಮೂಹೂರ್ತ ಸಂಘದ ವತಿಯಿಂದ ೭೫ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಆಟೋಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೈಲ್‌ಮೂಹೂರ್ತ ಸಂಘದ ಅಧ್ಯಕ್ಷ ಮಂಡೇಟಿರ ಸುರೇಶ್ ಹೇಳಿದರು.

ಸಮಾರಂಭದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರು ಸ್ಥಾಪಿಸಿದಂತಹ ಕೈಲ್‌ಮೂಹೂರ್ತ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದೇವೆ. ಪ್ರತಿವರ್ಷ ಕೈಲ್‌ಮುಹೂರ್ತ ಹಬ್ಬದಂದು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಇನ್ನು ಮುಂದೆಯು ಮುಂದಿನ ಪೀಳಿಗೆಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. ಆರಂಭದ ದಿನವಾದ ಇಂದು ಪುರುಷರಿಗೆ ಮತ್ತು ಮಹಿಳೆಯರಿಗೆ .೨೨ ರೈಫಲ್, ೧೨ ಬೋರ್ ಮತ್ತು ಏರ್ ರೈಫಲ್ ಶೂಟಿಂಗ್ ಸ್ಪರ್ಧೆ ನಡೆಸಲಾಗುತ್ತಿದೆ. ಶನಿವಾರದಂದು ನಾಲ್ಕೇರಿ, ಕಡಂಗಮೂರುರು, ಕುಂಜಿಲಗೇರಿ, ಬೆಳ್ಳುಮಾಡು ಅರಮೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪುರುಷರಿಗೆ ಮತ್ತು ಮಹಿಳೆಯರಿಗೆ ಥ್ರೋಬಾಲ್ ಮತ್ತು ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಕಾರ್ಯದರ್ಶಿ ಅಪ್ಪಚಂಗಡ ಪ್ರಕಾಶ್ ಪೂಣಚ್ಚ ಮಾತನಾಡಿ ವಜ್ರಮಹೋತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ಭಾನುವಾರ ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಡೇಟಿರ ಸುರೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ತೀತಿರ ರೋಷನ್ ಅಪ್ಪಚ್ಚು, ಕುಪ್ಪಂಡ ಛಾಯಾ ನಂಜಪ್ಪ, ಉದ್ಯಮಿ ಬೇರೆರ ಮಧು ಅಯ್ಯಣ್ಣ ಅವರುಗಳು ಉಪಸ್ಥಿತಲಿರುವರು ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಮೇವಡ ರಘು ಮತ್ತಿತರರು ಉಪಸ್ಥಿತರಿದ್ದರು. ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ವಿಕ್ಷಕ ವಿವರಣೆ ನೀಡಿದರು.