ಮಡಿಕೇರಿ, ನ. ೧೫ ರಾಷ್ಟç ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳು ನಡೆಸಿದ ಬಾಂಬ್ ಸ್ಪೋಟ ಮತ್ತು ಹತ್ಯೆಯನ್ನು ಖಂಡಿಸಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜನರು ತಿಮ್ಮಯ್ಯ ವೃತ್ತದಲ್ಲಿ ಸೇರಿದ ಹಿಂದೂ ಸಂಘಟನೆ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಘೋಷಣೆಯನ್ನು ಹೋಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ಕಲ್ಲು ಹೊಡೆದು ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದವರು, ಅಂತವರನ್ನು ನಮ್ಮ ದೇಶದ ಜಾತ್ಯತೀತ ರಾಜಕಾರಣಿಗಳು ನಿರುದ್ಯೋಗಿಗಳು, ಅವಿದ್ಯಾವಂತರು ಎಂದು ಹೇಳುತ್ತಿದ್ದರು, ಆದರೆ ಇದೀಗ ಸಮಾಜದ ಪ್ರತಿಷ್ಠಿತ ವೈದ್ಯರುಗಳು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವುದು ಖಂಡನೀಯ. ಈ ಘಟನೆಯನ್ನು ಯಾವುದೇ ಜಾತ್ಯತೀತ ರಾಜಕಾರಣಿಗಳು ಖಂಡಿಸದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಭಯೋತ್ಪಾದಕ ಚಟುವಟಿಕೆಗಳಿಗೆ ಹಿಂದೂ ಸಮಾಜ ಧೃತಿಗೆಡುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ದೇಶ ನೀಡಲಿದೆ. ಮತಾಂಧ ಭಯೋತ್ಪಾದಕರಿಗೆ ಇಲ್ಲಿನ ರಾಜಕಾರಣಿಗಳು ಬೆಂಬಲ ನೀಡಿರುವ ಸಂಶಯವಿದೆ ಎಂದು ಅಜಿತ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಹ ಸಂಚಾಲಕ ಕುಮಾರ್, ಕಾರ್ಯಕಾರಿಣಿ ಸದಸ್ಯರಾದ ಸುನಿಲ್, ಚೇತನ್ ಶಾಂತಿನಿಕೇತನ, ಭವನ್ ಮೇಕೇರಿ, ಮಡಿಕೇರಿ ತಾಲೂಕು ಸಂಚಾಲಕ ಬಾಲಕೃಷ್ಣ ರೈ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಬಿ.ಕೆ ಜಗದೀಶ್, ಬಿ.ಕೆ ಅರುಣ್ ಕುಮಾರ್, ಮಡಿಕೇರಿ ಮೂಡ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ನಗರಸಭಾ ಅಧ್ಯಕ್ಷೆ ಕಲಾವತಿ, ಸದಸ್ಯರಾದ ಸಬಿತ, ಶ್ವೇತ ಇನ್ನಿತರರು ಇದ್ದರು.