ಮಡಿಕೇರಿ, ನ.೧೫: ಸರ್ಕಾರ ಕಾಫಿ ಬೆಳೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ ಸಂಪಾಜೆ, ಕರಿಕೆ, ಪೆರಾಜೆ, ಚೆಂಬು ಭಾಗದಲ್ಲಿಯೂ ಸಹ ಕಾಫಿ ಬೆಳೆಯುವಂತಾಗಬೇಕು ಎಂದು ಕಾಫಿ ಮಂಡಳಿ ಸದಸ್ಯರಾದ ತಳೂರು ಕಿಶೋರ್ ಕುಮಾರ್ ಅವರು ಸಲಹೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ೭೨ ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ಹಾಗೂ ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರ ಕಾಫಿ ಉತ್ಪಾದನೆಗೆ ಸಹಾಯಧನ ಕಲ್ಪಿಸುತ್ತಿದೆ. ಜತೆಗೆ ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಅಡಿಕೆ, ರಬ್ಬರ್, ಗೇರು ಜೊತೆಗೆ ಕಾಫಿ ಬೆಳೆಯಲು ಪ್ರಯತ್ನಿಸುವಂತೆ ಸಲಹೆ ಮಾಡಿದರು.
ದೇಶವು ಕಾಫಿ ಉತ್ಪಾದನೆಯಲ್ಲಿ ೩.೬೦ ಲಕ್ಷ ಮೆಟ್ರಿಕ್ ಟನ್ ಉತ್ಪಾದಿಸುತ್ತಿದ್ದು, ಇದರಲ್ಲಿ ೨.೩೦ ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಉಳಿದಂತೆ ೧.೫೦ ಲಕ್ಷ ರೂ. ಮೆಟ್ರಿಕ್ ಟನ್ ದೇಶದಲ್ಲಿಯೇ ವ್ಯಾಪಾರ ಆಗುತ್ತಿದೆ ಎಂದು ತಳೂರು ಕಿಶೋರ್ ಕುಮಾರ್ ಹೇಳಿದರು.
ರಾಜ್ಯವು ಕಾಫಿ ಉತ್ಪಾದನೆಯಲ್ಲಿ ಶೇ.೬೦ ರಿಂದ ೬೫ ರಷ್ಟು, ಕೊಡಗು ಜಿಲ್ಲೆ ಕಾಫಿ ಉತ್ಪಾದನೆಯಲ್ಲಿ ಶೇ.೩೦ ರಿಂದ ೩೫ ರಷ್ಟು, ಹಾಗೆಯೇ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಿಂದ ಶೇ.೨೫ ರಿಂದ ೩೦ ರಷ್ಟು, ಕೇರಳ, ತಮಿಳುನಾಡು, ಆಂದ್ರ ಪ್ರದೇಶದಲ್ಲಿ ಶೇ.೨೦ ರಿಂದ ೩೦ ರಷ್ಟು ಹಾಗೆಯೇ ಈಶಾನ್ಯ ರಾಜ್ಯಗಳಲ್ಲಿ ಶೇ.೧೦ ರಿಂದ ೧೫ ರಷ್ಟು ಕಾಫಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ಕಾಫಿ ಮಂಡಳಿ ಸದಸ್ಯರು ವಿವರಿಸಿದರು.
ದೇಶದಲ್ಲಿ ೧೫ ಸಾವಿರ ಕೋಟಿ ವಿದೇಶಿ ವಿನಿಮಯ ಕಾಫಿ ಉತ್ಪಾದನೆಯಿಂದ ಆಗುತ್ತಿದ್ದು, ೨೦೪೭ ಕ್ಕೆ ೫೦ ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಗುರಿ ಹೊಂದಲಾಗಿದ್ದು, ಇದರಿಂದ ೭ ಲಕ್ಷ ಮೆಟ್ರಿಕ್ ಟನ್ ಗುರಿ ರೈತರಿಗೆ ಲಾಭ ದೊರೆಯಲಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಮಾತನಾಡಿ ಸಹಕಾರ ಕ್ಷೇತ್ರ ಇಡೀ ವಿಶ್ವದಲ್ಲಿ ಬೃಹತ್ ಆಗಿ ಬೆಳೆದಿದ್ದು, ಇದನ್ನು ಮತ್ತಷ್ಟು ಬಲಪಡಿಸಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು. ಜಿಲ್ಲೆಯ ೯ ಸಹಕಾರ ಸಂಘಗಳು ಹಾಗೂ ೨ ಧವಸ ಭಂಡಾರ ಸಹಕಾರ ಸಂಘಗಳು ಶತಮಾನೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು. ಕೊಡಗಿನ ಹಿರಿಯ ಚೇತನರು ಕಾಫಿ, ಏಲಕ್ಕಿ, ಜೇನು, ಕಿತ್ತಳೆ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿ, ಕೃಷಿಕರ ಬದುಕು ಹಸನುಗೊಳಿಸುವಲ್ಲಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಸಹಕಾರ ಸಂಘಗಳ ಮೂಲಕ ರೈತರಿಗೆ ಸುಲಭದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಹಕಾರ ಸಪ್ತಾಹ ಮೂಲಕ ಸಹಕಾರ ಕ್ಷೇತ್ರದಲ್ಲಿ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ ಒಳ್ಳೆಯ ದಿಕ್ಕಿನತ್ತ ಸಾಗುವತ್ತ ಗಮನಹರಿಸಬೇಕಿದೆ ಎಂದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ ಸಹಕಾರ ಸಂಘಕ್ಕೆ ೧೨೧ ವರ್ಷಗಳ ಇತಿಹಾಸವಿದ್ದು, ಸಿದ್ದನೆಗೌಡ ಪಾಟೀಲ ಅವರು ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಹಿರಿಯರು ಸಹಕಾರ ಕ್ಷೇತ್ರ ಬಲವರ್ಧನೆಗೆ ಶ್ರಮಿಸಿದ್ದಾರೆ ಎಂದರು. ನಮಗಾಗಿ ನೀವು, ನಿಮಗಾಗಿ ನಾವು ಎಂಬುದು ಸಹಕಾರ ತತ್ವವಾಗಿದ್ದು, ರಾಷ್ಟçದಲ್ಲಿ ಕೃಷಿಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರ ಸಂಘಗಳು ಮತ್ತಷ್ಟು ಬಲವರ್ಧನೆ ಆಗಬೇಕು ಎಂದರು.
ಸಹಕಾರ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಹಾಗೆಯೇ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಕಾರಿಯಾಗಿದೆ ಎಂದರು. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ಪೆರಾಜೆ ಸಹಕಾರ ಸಂಘ ಸ್ಥಾಪಿಸುವಲ್ಲಿ ಡಿಸಿಸಿ ಬ್ಯಾಂಕ್ ಹೆಚ್ಚಿನ ಸಹಕಾರ ನೀಡಿದೆ ಎಂದರು.
ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಥಿಕ ಶಿಸ್ತು ಇದ್ದಾಗ ಅಭಿವೃದ್ಧಿ ಸಾಧ್ಯ. ಪೆರಾಜೆ, ಚೆಂಬು, ಸಂಪಾಜೆ ಭಾಗದವರು ಅಡಿಕೆಯನ್ನು ನಂಬಿ ಬದುಕುತ್ತಾರೆ. ಅಡಿಕೆ ರೋಗದಿಂದ ಆದಾಯ ಕಡಿಮೆಯಾಗಿದೆ. ಈಗ ಸದ್ಯಕ್ಕೆ ಮಿಶ್ರ ಬೆಳೆ ಬೆಳೆಯುವಂತಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕರಾದ ಹೊಸೂರು ಸತೀಶ್ ಕುಮಾರ್ ಅವರು ಮಾತನಾಡಿ ಸಹಕಾರ ಸಂಘಗಳಲ್ಲಿಯೂ ಹಲವು ಲೋಪದೋಷಗಳು ಇದ್ದು, ಅದನ್ನು ಸರಿಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು. ಸಹಕಾರ ಸಂಘಗಳು ಗ್ರಾಮೀಣ ಜನರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಶ್ಯಾಮಲಾ ಅವರು ಮಾತನಾಡಿ ಸಹಕಾರ ಕ್ಷೇತ್ರ ಬಹಳ ವಿಶಾಲವಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವಂತಾಗಬೇಕು ಎಂದರು. ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಅಭಿವೃದ್ಧಿ ಆಗಬೇಕು. ಸ್ವಾವಲಂಬಿ ಬದುಕಿಗೆ ಸಹಕಾರ ಕ್ಷೇತ್ರ ಸಹಕಾರಿಯಾಗಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರಾದ ಕೆ.ಎಂ.ತಮ್ಮಯ್ಯ, ವಿ.ಕೆ.ಅಜಯ್ ಕುಮಾರ್, ಬಲ್ಲಾರಂಡ ಮಣಿಉತ್ತಪ್ಪ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರಾದ ಎಸ್.ಆರ್. ಸುನಿಲ್ ರಾವ್, ಎಂ.ಟಿ.ಸುಬ್ಬಯ್ಯ, ಪಿ.ಎನ್. ಚಂದ್ರಪ್ರಕಾಶ್, ಕೆ.ಎನ್. ಸತೀಶ್, ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಡಿ. ರವಿಕುಮಾರ್, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಪಿ.ಎಂ.ಅಶೋಕ್, ಇತರರು ಇದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಯೋಗೇಂದ್ರ ನಾಯಕ್ ಸ್ವಾಗತಿಸಿದರು.
ವಿದ್ಯಾರ್ಥಿ ಗೌತಮ ಪ್ರಾರ್ಥಿಸಿದರು. ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡಿದರು. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಲೋಕೇಶ್ ವಂದಿಸಿದರು.
ಸಹಕಾರ ಸಪ್ತಾಹ ಸಂದರ್ಭ ಆರೋಗ್ಯ ಉಚಿತ ತಪಾಸಣೆ ನಡೆಯಿತು. ಹಾಗೆಯೇ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ತರಕಾರಿ ಹಾಗೂ ವಿವಿಧ ವಸ್ತುಗಳ ಮಾರಾಟ ಮೇಳ ನಡೆಯಿತು.