ಮಡಿಕೇರಿ, ನ. ೧೫: ಎಸ್ಕೆಎಫ್ಸಿ ಮರಗೋಡು ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತಿಥೇಯ ಎಸ್ಕೆಎಫ್ಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸಾಕರ್ ಯುನೈಟೆಡ್ ಅಮ್ಮತ್ತಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು, ಹಾಗೆಯೆ ೩ ಹಾಗೂ ೪ನೇ ಸ್ಥಾನವನ್ನು ಸ್ಟಾರ್ ಬಾಯ್ಸ್ ಅಭ್ಯತ್ಮಂಗಲ ತಂಡ ಹಾಗೂ ಎಂಎಫ್ಸಿ ಅಮ್ಮತ್ತಿ ತಂಡ ಪಡೆದುಕೊಂಡಿತು, ಮರಗೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಸ್ಕೆಎಫ್ಸಿ ಮರಗೋಡು ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.
ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಅಭ್ಯತ್ಮಂಗಲ ಹಾಗೂ ಸಾಕರ್ ಯುನೈಟೆಡ್ ಅಮ್ಮತ್ತಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ ೨ ತಂಡಗಳು ಪೂರ್ಣ ಅವಧಿಯಲ್ಲಿ ೧-೧ ಗೋಲ್ಗಳ ಸಮಬಲ ಸಾಧಿಸಿ ಪೆನಾಲ್ಟಿಯತ್ತ ಸಾಗಿತು, ಪೆನಾಲ್ಟಿ ಶೂಟೌಟ್ನಲ್ಲಿ ಸಾಕರ್ ಯುನೈಟೆಡ್ ಅಮ್ಮತ್ತಿ ತಂಡವು ೪-೨ ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಫೈನಲ್ಗೆ ಅರ್ಹತೆ ಪಡೆದುಕೊಂಡಿತು.
ದ್ವಿತೀಯ ಸೆಮಿಫೈನಲ್ ಪಂದ್ಯವು ಆತಿಥೇಯ ಎಸ್ಕೆಎಫ್ಸಿ ಹಾಗೂ ಎಂಎಫ್ಸಿ ತಂಡದ ನಡುವೆ ನಡೆಯಿತು. ಎಸ್ಕೆಎಫ್ಸಿ ತಂಡವು ೪-೦ ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ಗೆ ಅರ್ಹತೆ ಪಡೆದುಕೊಂಡಿತು.
ಅತಿಥೇಯ ಎಸ್ಕೆಎಫ್ಸಿ ಹಾಗೂ ಸಾಕರ್ ಯುನೈಟೆಡ್ ಅಮ್ಮತ್ತಿ, ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಸ್ಕೆಎಫ್ಸಿ ಮರಗೋಡು ತಂಡವು ಸಾಕರ್ ಯುನೈಟೆಡ್ ಅಮ್ಮತ್ತಿ ವಿರುದ್ಧ ೨-೧ ಅಂತರದಲ್ಲಿ ಗೆದ್ದು ಎಸ್ಕೆಎಫ್ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಎಂಎಫ್ಸಿ ತಂಡದ ಶೇಷಪ್ಪ ಪಡೆದುಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಸಾಕರ್ ಯುನೈಟೆಡ್ ಅಮ್ಮತ್ತಿ, ತಂಡದ ಶಿವು ಪಡೆದುಕೊಂಡರು, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಎಸ್ಕೆಎಫ್ಸಿ ತಂಡದ ರಮೇಶ್ ಪಡೆದುಕೊಂಡರೆ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಎಸ್ಕೆಎಫ್ಸಿ ತಂಡದ ಪ್ರವೀತ್ ಪಡೆದರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸಾಕರ್ ಯುನೈಟೆಡ್ ಅಮ್ಮತ್ತಿ ತಂಡದ ನಾಯಕ ರಕ್ಷಿತ್ (ರಕ್ಷಿ) ಪಡೆದುಕೊಂಡರು.
ಎಸ್ಕೆಎಫ್ಸಿ ಫುಟ್ಬಾಲ್ ಆಯೋಜಕರಾದ ಎಂ.ಎಸ್. ವಿಜಯ್ ಅವರ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕ್ರೀಡೆ ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಮೊಗೇರ ಸಮುದಾಯದ ಸಂಘಟನೆಗಳು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ ಯುವಕರಲ್ಲಿ ಶಿಸ್ತು ಮತ್ತು ಸಹಕಾರದ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್ ಮರಗೋಡು ಮಾತನಾಡಿ, ಕ್ರೀಡೆಗಳು ಯುವಕರಲ್ಲಿ ಶಿಸ್ತಿನ ಮನೋಭಾವವನ್ನು ಬೆಳೆಸುತ್ತವೆ. ಗೆಲುವು-ಸೋಲುಗಳು ಸಹಜ, ಆದರೆ ಕ್ರೀಡಾಸ್ಫೂರ್ತಿ ಉಳಿಯಬೇಕು. ಈ ಕ್ರೀಡಾಕೂಟದ ಮೂಲಕ ಯುವಕರು ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆ ಸಿಕ್ಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರಗೋಡು ಪಂಚಾಯಿತಿ ಉಪಾಧ್ಯಕ್ಷೆ ಕವಿತ ಪ್ರಕಾಶ್ ಮಾತನಾಡಿ, ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಪ್ರಥಮ ವರ್ಷದ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿಜಯ್ ಎಂ.ಎಸ್ ಮಾತನಾಡಿ ಈ ರೀತಿಯ ಕ್ರೀಡಾಕೂಟಗಳು ಕ್ರೀಡಾಭಿಮಾನಿಗಳಿಗೆ ಹೊಸ ಉತ್ಸಾಹ ನೀಡುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಉತ್ಸಾಹದಿಂದ ನಡೆಯಲಿದೆ ಎಂದು ಕರೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಚಂದ್ರು ಎಂ.ಜಿ., ಕೊಡಗು ಜಿಲ್ಲಾ ಮೊಗೇರ ಫುಟ್ಬಾಲ್ ಅಧ್ಯಕ್ಷ ಅಶೋಕ್ ಎಂ.ಎA., ಪ್ರಮುಖರಾದ ಜನಾರ್ಧನ್ ಹೊಸ್ಕೇರಿ, ಪ್ರಕಾಶ್, ನೇತ್ರ ಉಮೇಶ್, ಚಂದ್ರಕಲಾ, ಹರೀಶ್, ಚಂದ್ರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕ್ರೀಡಾಕೂಟಕ್ಕೆ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್, ಅರುಣ, ಧನುಷ್, ಜೀವನ್, ವಿನು, ಕಾರ್ಯ ನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು, ರಮೇಶ್ ಹೆಬ್ಬೆಟ್ಟಗೇರಿ ನಡೆಸಿಕೊಟ್ಟರೆ, ಸ್ಕೋರರ್ ಆಗಿ ಸಂಜಿತ್ ಹಾಗೂ ಮಂಜು ಕಾರ್ಯ ನಿರ್ವಹಿಸಿದರು.
ಕ್ರೀಡಾಕೂಟದ ಬಹುಮಾನ ವಿತರಣೆ ಸಂದರ್ಭ ಎಸ್.ಕೆ.ಎಫ್ಸಿ.ಯ ಆಯೋಜಕರಾದ ವಿಜಯ್ ಎಂ.ಎಸ್., ದೀಪಕ್, ಚಂಪಕ್, ಸಂಜಿತ್, ಚಂದ್ರ, ವಿಶ್ವನಾಥ್, ಅಜಯ್, ಪಾಲ್ಗೊಂಡಿದ್ದರು.
- ಅಶೋಕ್, ಮಡಿಕೇರಿ.