ಕಣಿವೆ, ನ. ೨೫: ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಅನ್ನದ ಬಟ್ಟಲಿನಲ್ಲಿ ಈ ಬಾರಿ ಅನ್ನದಾತರು ಕೈಗೊಂಡಿದ್ದ ವಾರ್ಷಿಕ ಭತ್ತದ ಫಸಲು ಕಟಾವಿಗೆ ಸಿದ್ದಗೊಂಡಿದೆ.

ಭತ್ತದ ಒಕ್ಕಣೆಯ ದಿನದಿಂದ ೧೨೦ ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿಯ ಬೆಳೆ ಈ ಭತ್ತದ ಫಸಲು ಗೊನೆಗಳಲ್ಲಿ ತುಂಬಿ ಬಾಗುವ ಮೂಲಕ ತನ್ನ ಬೆಳವಣಿಗೆ, ಪೋಷಣೆ, ಪಾಲನೆ ಹಾಗೂ ಲಾಲನೆಗೈದ ಭೂಮಿ ತಾಯಿಗೆ ನಮಿಸುತ್ತಿದೆ.

ಕಣಿವೆ ಗ್ರಾಮದ ನಿವೃತ್ತ ಕರ್ನಲ್ ನಾರಾಯಣ ಮೂರ್ತಿ ಎಂಬವರ ಗದ್ದೆಯಲ್ಲಿ ಪ್ರಗತಿ ಪರ ಕೃಷಿಕ ರಾಮ ಎಂಬವರು ಬೆಳೆದ ಆರ್ ಎನ್ ಆರ್ ಭತ್ತದ ತಳಿ ಸೊಂಪಾಗಿ ಬೆಳೆದು ನಿಂತಿದ್ದು ಇನ್ನೇನು ೮ ದಿನಗಳಲ್ಲಿ ಕಟಾವುಗೊಳ್ಳುತ್ತಿದೆ.

ಹಾಗಾಗಿ ಕೃಷಿಕ ರಾಮ ಬೆಳೆದು ನಿಂತ ಭತ್ತದ ಫಸಲು ತುಂಬಿದ ಹುಲ್ಲಿನ ರಾಶಿಯನ್ನು ಒಂದೆಡೆ ಸಂಗ್ರಹಿಸಿ ಗುಡ್ಡೆ ಮಾಡಿಟ್ಟು ಒಕ್ಕಣೆ ಮಾಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಒಂದು ಎಕರೆ ಗದ್ದೆಯಲ್ಲಿ ಭತ್ತದ ಬೆಳೆ ಕಟಾವು ಮಾಡಲು ೧೨ ಸಾವಿರ ರೂಗಳು ಖರ್ಚಾಗುತ್ತದೆ. ಮತ್ತೆ ಭತ್ತ ಹುಲ್ಲಿನೊಂದಿಗೆ ಕೆಲ ದಿನಗಳ ಬಳಿಕ ಮಾಗಿದ ಮೇಲೆ ಕಣದಲ್ಲಿ ಒಕ್ಕಣೆ ಮಾಡಿ ಮನೆಗೆ ತುಂಬಿಸಿಕೊಳ್ಳುವ ತವಕದಲ್ಲಿ ಅನ್ನದಾತ ಕುಟುಂಬಗಳು ಮಗ್ನವಾಗಿವೆ.

ಕೊಡಗಿನ ಹಾರಂಗಿ ಅಚ್ಚುಕಟ್ಟು ಹಳೆ ಕೂಡಿಗೆಯಿಂದ ಕಣಿವೆ, ಹೆಬ್ಬಾಲೆ, ತೊರೆನೂರು, ಮಣಜೂರು, ಶಿರಂಗಾಲ ರಾಜ್ಯ ಹೆದ್ದಾರಿಯುದ್ದಕ್ಕೂ ಎರಡೂ ಕಡೆಗಳಲ್ಲಿ ಗೊನೆ ತುಂಬಿ ಬಾಗಿ ಭೂ ತಾಯಿಗೆ ನಮಿಸುವ ಭತ್ತದ ಗದ್ದೆಗಳನ್ನು ನೋಡುವುದೇ ಒಂದು ಕಣ್ಣಿಗೆ ಅಂದ. ಮನಕ್ಕೂ ಆನಂದ.

ಏಕೆAದರೆ, ಮನುಷ್ಯನ ಜೀವ ಸಂಜೀವಿನಿಯಾದ ವರ್ಷದ ಕೂಳು ಆದ ಈ ಭತ್ತದ ಬೆಳೆಯನ್ನು ಬಹಳ ಹರ್ಷದಿಂದ ಅನ್ನ ಬಟ್ಟಲಿಗೆ ಒಯ್ಯುವುದು ಅದೊಂದು ಗ್ರಾಮೀಣ ರೈತನ ಪಾಲಿನ ಭವ್ಯ ಪರಂಪರೆ.