*ಗೋಣಿಕೊಪ್ಪ, ನ. ೨೫: ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತಿನ ಗುಣ ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಜವಾಬ್ದಾರಿತವಾಗಿ ನಡೆದುಕೊಳ್ಳಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶಣೈ ಸಲಹೆ ನೀಡಿದರು.
ಇಲ್ಲಿನ ಲಯನ್ಸ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಾಲೆಗಳು ಕೇವಲ ಪಠ್ಯಗಳ ಜ್ಞಾನ ನೀಡುವ ಸ್ಥಳವಲ್ಲ, ಅವು ವಿದ್ಯಾರ್ಥಿಗಳನ್ನು ರೂಪಿಸುವ ಪವಿತ್ರ ನೆಲೆಗಳು. ನಿಮ್ಮ ಶಾಲೆಯ ಮಕ್ಕಳು ಇಂದು ಪ್ರದರ್ಶಿಸಿದ ಕಲೆ, ಅವರ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನಕ್ಕೆ ನಿಜವಾದ ಸಾಕ್ಷಿ ಎಂದರು.
ಟ್ರಸ್ಟ್ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಲಯನ್ಸ್ ಟ್ರಸ್ಟ್ ಗೌರವ ಕಾರ್ಯದರ್ಶಿ ಡಾ. ಸೂರಜ್ ಉತ್ತಪ್ಪ ಶಾಲಾ ಆಡಳಿತ ಮಂಡಳಿ ವರದಿ ಮಂಡಿಸಿದರು
ಸAಸ್ಥೆಯ ಮುಖ್ಯ ಶಿಕ್ಷಕಿ ಲತಾ ಸಿ.ಬಿ., ಘಾನ ಸಿ.ಎಸ್. ಹಾಗೂ ತಂಗಮ್ಮ ಪಿ.ಡಿ. ಇವರುಗಳು ಶಾಲೆಯ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಶಾಲೆ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಕುರಿತು ವರದಿ ವಾಚಿಸಿದರು.
ವಿದ್ಯಾರ್ಥಿಗಳು, ನೃತ್ಯ, ಸಂಗೀತ, ಯೋಗ ಪ್ರದರ್ಶನ, ಫ್ಯಾಷನ್ ಶೋ ಮತ್ತು ವಿವಿಧ ನೃತ್ಯಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಇದೇ ಸಂದರ್ಭ ಸಂಸ್ಥೆಯ ಹಿರಿಯ ಸದಸ್ಯರುಗಳಾದ ಚೆಪ್ಪುಡೀರ ಸುಭಾಷ್ ಮುತ್ತಣ್ಣ ಹಾಗೂ ಕುಸುಮ್ ಮುತ್ತಣ್ಣ ದಂಪತಿಯರನ್ನು ಸನ್ಮಾನಿಸಲಾಯಿತು. ಜೊತೆಗೆ ಶಾಲಾ ಮಟ್ಟದಿಂದ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಶಾಲಾ ಮಂಡಳಿಯ ಖಜಾಂಚಿ ಕೆ.ಪಿ. ಅಚ್ಚಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಬೋಪಣ್ಣ ಸಿ.ಪಿ., ಕಾರ್ಯದರ್ಶಿ ಎಂ.ಬಿ. ಸೌಮ್ಯ, ಮಮತಾ ಶಣೈ, ವಿದ್ಯಾರ್ಥಿ ನಾಯಕರುಗಳಾದ ರುಷಿಲ್ ತಮ್ಮಯ್ಯ, ಕೆ.ಬಿ. ದೇಚಮ್ಮ, ರಿನ್ಸಿ ಪೂಣಚ್ಚ ಹಾಗೂ ಪೋಷಕರು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಲಯನ್ಸ್ ಸದಸ್ಯರು ಇದ್ದರು.