ಸೋಮವಾರಪೇಟೆ, ನ. ೨೫: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಶಾಸಕರಾಗಿ ಎರಡೂವರೆ ವರ್ಷಗಳಲ್ಲಿ ೧೭೨೪.೧೬೫ ಕೋಟಿ ರೂ. ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತಂದಿದ್ದಾರೆ. ಇದರಲ್ಲಿ ೯೦೦ ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ದೋಣಿಗಾಲ್‌ನಿಂದ ಮಡಿಕೇರಿ ಸಂಪರ್ಕ ರಸ್ತೆಗೆ ಬಜೆಟ್‌ನಲ್ಲಿ ೯೦೦ ಕೋಟಿ ಮೀಸಲಿಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅನುದಾನದ ಬಗ್ಗೆ ಇಲಾಖಾವಾರು ಪಟ್ಟಿ ಬಿಡುಗಡೆ ಮಾಡಿದ ಅವರು, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಬಿಜೆಪಿ ವತಿಯಿಂದ ಜೇಸಿ ವೇದಿಕೆಯಲ್ಲಿ ನಡೆದ ಸಭೆಯಲ್ಲಿ, ೧೮೦೦ ಕೋಟಿ ಅನುದಾನದ ಬಗ್ಗೆ ವ್ಯಂಗ್ಯವಾಡಿದ್ದರು. ಈಗಾಗಲೇ ಕ್ಷೇತ್ರಕ್ಕೆ ಪ್ರಮುಖ ಇಲಾಖೆಗಳ ಮೂಲಕವೇ ೧೭೨೪ ಕೋಟಿ ಅನುದಾನ ಬಂದಿದೆ ಎಂದು ಸತೀಶ್ ಹೇಳಿದರು. ಹಾಲಿ ಶಾಸಕರು ತಮ್ಮ ಕ್ಷೇತ್ರಕ್ಕೆ ತಂದಿರುವ ೧೭೨೪.೧೬೫ ಕೋಟಿ ರೂ.ಗಳ ಅನುದಾನದ ಪಟ್ಟಿಯನ್ನು ಸಂಬAಧಪಟ್ಟ ಇಲಾಖಾಧಿಕಾರಿಗಳು ಕೊಟ್ಟಿದ್ದಾರೆ. ಅದನ್ನು ಬಿಜೆಪಿಯ ಮಾಜಿ ಶಾಸಕರಿಗೆ ಅಂಚೆ ಮೂಲಕ ಕಳುಹಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯಿಂದ ಮಡಿಕೇರಿ, ಸೋಮವಾರಪೇಟೆ, ದೋಣಿಗಲ್ಲು ರಸ್ತೆಗೆ ೯೦೦ ಕೋಟಿ ರೂ.ಗಳು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈಗಾಗಲೇ ಡಿಪಿಅರ್‌ಗೆ ೪ ಕೋಟಿ ರೂ. ಬಿಡುಗಡೆಯಾಗಿದೆ. ೨೦೨೬ನೇ ಇಸವಿಯ ಪ್ರಾರಂಭದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಇನ್ನುಳಿದ ಅನುದಾನದ ಅನೇಕ ಕಾಮಗಾರಿಗಳು ಈಗಾಗಲೇ ನಡೆಯುತ್ತಿವೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಂದಿನ ಮಾರ್ಚ್ ಒಳಗೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದು ಹೇಳಿದರು.

ಮುಂದಿನ ಎರಡೂವರೆ ವರ್ಷದ ಅವಧಿಯಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಮಾದರಿ ಕ್ಷೇತ್ರವನ್ನು ಮಾಡುವ ಗುರಿ ಶಾಸಕರಿಗಿದೆ. ಅಭಿವೃದ್ಧಿಯನ್ನು ಸಹಿಸಲಾಗದ ಮಾಜಿ ಶಾಸಕರು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಮುಂದಿನ ಗ್ರಾ.ಪಂ., ತಾ.ಪಂ. ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದರು. ಮಾಜಿ ಶಾಸಕ ರಂಜನ್ ಅವರು ೨೫ ವರ್ಷ ಶಾಸಕರಾಗಿದ್ದಾಗಲು, ಕಾಂಗ್ರೆಸ್ ಸರ್ಕಾರವೇ ಅನುದಾನ ಕೊಟ್ಟಿದೆ. ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜು ಸೇರಿದಂತೆ ಎಲ್ಲಾ ಯೋಜನೆಗಳು ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಧರ್ಮಸಿಂಗ್ ಅವರುಗಳು ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಗೆ ಕೊಟ್ಟ ಕೊಡುಗೆಗಳು. ಬಿಜೆಪಿ ೮ ವರ್ಷ ರಾಜ್ಯವನ್ನು ಆಳಿದಾಗ ವಿಶೇಷ ಅನುದಾನಗಳನ್ನು ನೀಡಿಲ್ಲ ಎಂದು ದೂರಿದರು.

ಕಳೆದ ೨೫ ವರ್ಷ ಶಾಸಕರಾಗಿದ್ದ ರಂಜನ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಅಲಗಳೆಯುವುದಿಲ್ಲ. ಆದರೆ ಸಿ ಆ್ಯಂಡ್ ಡಿ ಸಮಸ್ಯೆಯನ್ನು ರಂಜನ್ ಬಗೆಹರಿಸಿಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲೆಯ ಶಾಸಕರು ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ. ವಿಶೇಷ ಸಮಿತಿ ರಚನೆಯಾಗಿದೆ. ಕಾಂಗ್ರೆಸ್ ಸರ್ಕಾರ ಯಾವತ್ತು ರೈತಸ್ನೇಹಿಯಾಗಿದೆ. ಅನೇಕ ವರ್ಷಗಳಿಂದ ಬೆಳೆಹಾನಿ ಪರಿಹಾರ, ರೈತರ ಸಾಲಮನ್ನ ಮಾಡಿದೆ. ಬಡಜನರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ಬಿ.ಎಂ.ಬಸವರಾಜು, ಕಾರ್ಯದರ್ಶಿ ಕೆ.ಜೆ.ಸುನಿಲ್, ಡಿಸಿಸಿ ಸದಸ್ಯ ಜೆ.ಎಲ್. ಜನಾರ್ಧನ್, ನಗರ ಅಧ್ಯಕ್ಷ ಮಂಜುನಾಥ ಇದ್ದರು.