ಸೋಮವಾರಪೇಟೆ, ನ. ೨೫: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯಭಾಗಕ್ಕೆ ಮಗುಚಿಕೊಂಡ ಘಟನೆ ಸಮೀಪದ ನಗರೂರು ಗ್ರಾಮದಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಕಲಗೂರು ಕ್ಷೇತ್ರದ ಶಾಸಕ ಎ.ಮಂಜು ಅವರ ಮಾಲೀಕತ್ವದ ನಗರೂರು ಎಸ್ಟೇಟ್‌ನ ಲೈನ್‌ಮನೆಯಿಂದ ಕುಸುಬೂರು ಎಸ್ಟೇಟ್‌ನ ಲೈನ್‌ಮನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸಂದರ್ಭ ನಗರೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ.
ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ನಗರೂರು ತಿರುವಿನಲ್ಲಿ ಪಿಕ್‌ಅಪ್ ವಾಹನದ ಚಕ್ರ ಸ್ಫೋಟಗೊಂಡ ಪರಿಣಾಮ ಹೆದ್ದಾರಿಯಲ್ಲಿಯೇ ಪಿಕ್‌ಅಪ್ ಪಲ್ಟಿಯಾಗಿ ಬಿದ್ದಿದ್ದು, ಹಿಂಭಾಗ ನಿಂತಿದ್ದ ಅಸ್ಸಾಂ ಮೂಲದ ಕಾರ್ಮಿಕ ಬಾಬು ಸೇರಿದಂತೆ ಇತರರು ಕೆಳಗೆ ಬಿದ್ದಿದ್ದಾರೆ. ಘಟನೆಯಿಂದ ಬಾಬುವಿನ ಕಾಲು ಮುರಿತಕ್ಕೊಳಗಾಗಿದ್ದು, ಚಾಲಕ ರವಿ ಅವರ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ.
ಪಿಕ್‌ಅಪ್ ವಾಹನ ಪಲ್ಟಿಯಾದ ಘಟನೆ ಸಮೀಪದ ವೇಬ್ರಿಡ್ಜ್ ಕೇಂದ್ರದಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರ್ಮಿಕರು ಪ್ರಾಣದೊಂದಿಗೆ ಉಳಿದಿರುವುದೇ ಹೆಚ್ಚು ಎಂಬAತಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪಿಕ್‌ಅಪ್ ವಾಹನದ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.