ಕಣಿವೆ, ನ. ೨೫: ತಾಲೂಕು ಕೇಂದ್ರ ಕುಶಾಲನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶಿಲಾನ್ಯಾಸಗೊಂಡಿದ್ದ ನೂತನ ನ್ಯಾಯಾಲಯದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ರೂ. ೧೨ ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದ ನ್ಯಾಯಾಲಯದ ಕಟ್ಟಡವನ್ನು ಕುಶಾಲನಗರದ ಪ್ರವಾಸಿ ಮಂದಿರದ ಜಾಗದಲ್ಲಿ ನಿರ್ಮಿಸಲಾಗಿದೆ. ನೂತನ ಕಟ್ಟಡ ಪ್ರತ್ಯೇಕ ಎರಡು ನ್ಯಾಯಾಲಯಗಳ ಸಭಾಂಗಣ, ಮಹಿಳಾ ಹಾಗೂ ಪುರುಷ ವಕೀಲರ ಪ್ರತ್ಯೇಕ ಕೊಠಡಿಗಳು, ಕ್ಯಾಂಟೀನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಹೊಸ ಕಟ್ಟಡ ಹೊಂದಿದೆ.
ನೂತನ ನ್ಯಾಯಾಲಯ ಕಟ್ಟಡವನ್ನು ಬರುವ ಮಾರ್ಚ್ ಮಾಸಾಂತ್ಯದಲ್ಲಿ ಲೋಕಾರ್ಪಣೆಗೊಳಿಸುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ.
ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ಈ ಹಿಂದೆ ಇದ್ದ ನ್ಯಾಯಾಲಯಕ್ಕೆ ಕುಶಾಲನಗರ ಭಾಗದಿಂದ ನೂರಾರು ಪ್ರಕರಣಗಳು ದಾಖಲಾಗುತ್ತಿದ್ದ ಕಾರಣ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಭಾಗದ ಗ್ರಾಮಗಳ ಬಹುತೇಕ ಮಂದಿ ಸುಮಾರು ೬೦ ಕಿ.ಮೀ.ಗೂ ಹೆಚ್ಚು ಕ್ರಮಸಿ ನ್ಯಾಯಾಲಯಕ್ಕೆ ತೆರಳÀಬೇಕಿತ್ತು.
ಕುಶಾಲನಗರಕ್ಕೆ ಪ್ರತ್ಯೇಕ ನ್ಯಾಯಾಲಯ ಬೇಕು ಎಂಬ ಈ ಭಾಗದ ಸಾರ್ವಜನಿಕರ ಒತ್ತಾಸೆಗೆ ನಿಂತ ಹಿರಿಯ ವಕೀಲ ಆರ್.ಕೆ. ನಾಗೇಂದ್ರ ಅವರ ನಿರಂತರ ಹೋರಾಟಕ್ಕೆ ಮಣಿದ ನ್ಯಾಯಾಂಗ ಇಲಾಖೆ ಕುಶಾಲನಗರಕ್ಕೆ ಪ್ರತ್ಯೇಕ ನ್ಯಾಯಾಲಯವನ್ನು ಮಂಜೂರಾತಿ ನೀಡಿತ್ತು. ಇದೀಗ ಕಳೆದ ಹಲವು ವರ್ಷಗಳಿಂದಲೂ ಕುಶಾಲನಗರದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿದ್ದು, ಹೊಸ ನ್ಯಾಯಾಲಯ ಕಟ್ಟಡ ಇನ್ನೇನು ಕೆಲವೇ ತಿಂಗಳಿನಲ್ಲಿ ತೆರೆದುಕೊಳ್ಳಲಿದೆ.